ADVERTISEMENT

ನಾಸಾ–ಇಸ್ರೊ ಸಹಭಾಗಿತ್ವ | ಇಂದು ನಭಕ್ಕೆ ನಿಸಾರ್ ಉಪಗ್ರಹ

ಪಿಟಿಐ
Published 29 ಜುಲೈ 2025, 13:50 IST
Last Updated 29 ಜುಲೈ 2025, 13:50 IST
‘ನಿಸಾರ್‌’  ಉಪಗ್ರಹ
‘ನಿಸಾರ್‌’  ಉಪಗ್ರಹ   

ಶ್ರೀಹರಿಕೋಟ: ಇಸ್ರೊ ಹಾಗೂ ನಾಸಾ ಜಂಟಿಯಾಗಿ ಅನುಷ್ಠಾನಗೊಳಿಸುತ್ತಿರುವ ‘ನಿಸಾರ್’ ಕಾರ್ಯಕ್ರಮವು, ಬಾಹ್ಯಾಕಾಶ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಭಾರತದ ಸಾಮರ್ಥ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವುದಕ್ಕೆ ವೇದಿಕೆಯಾಗಿದೆ ಎಂದು ಇಸ್ರೊದ ಮಾಜಿ ವಿಜ್ಞಾನಿ ರಾಧಾಕೃಷ್ಣ ಕವುಲೂರು ಹೇಳಿದ್ದಾರೆ.

ಈ ಬಾಹ್ಯಾಕಾಶ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ ರಾಧಾಕೃಷ್ಣ ಕವುಲೂರು, ‘ನಿಸಾರ್‌’ ಉಪಗ್ರಹ ಕಳುಹಿಸುವ ದತ್ತಾಂಶಗಳು ವಿಶ್ವದೆಲ್ಲೆಡೆ ಇರುವ ಅದರ ಬಳಕೆದಾರರಿಗೆ ಮುಕ್ತವಾಗಿ ಲಭ್ಯವಾಗಲಿದ್ದು, ಡೌನ್‌ಲೋಡ್‌ ಮಾಡಿಕೊಳ್ಳಬಹುದು’ ಎಂದು ಹೇಳಿದರು.

‘ಈ ಉಪಗ್ರಹದಲ್ಲಿ ಅಳವಡಿಸಲಾಗಿರುವ ಎಲ್‌–ಬ್ಯಾಂಡ್ ಅನ್ನು ನಾಸಾ ಒದಗಿಸಿದ್ದರೆ, ಎಸ್‌–ಬ್ಯಾಂಡ್‌ ಅನ್ನು ಇಸ್ರೊ ಒದಗಿಸಿದೆ. ಎಸ್‌–ಬ್ಯಾಂಡ್‌ ಅನ್ನು ಸಿಂಥೆಟಿಕ್‌ ಅಪರ್ಚರ್ ರೇಡಾರ್‌ನಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಭೂಮಿಗೆ ಸಂಬಂಧಿಸಿದಂತೆ ವ್ಯಾಪಕ ದತ್ತಾಂಶ ಸಂಗ್ರಹ ಸಾಧ್ಯವಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

ಭೂ ವೀಕ್ಷಣೆ ಉದ್ದೇಶದಿಂದ ಉಪಗ್ರಹ ನಿರ್ಮಾಣ ಹಾಗೂ ಉಡ್ಡಯನಕ್ಕಾಗಿ ರೂಪಿಸಲಾಗಿರುವ ಬಾಹ್ಯಾಕಾಶ ಕಾರ್ಯಕ್ರಮವೇ ‘ನಾಸಾ–ಇಸ್ರೊ ಸಿಂಥೆಟಿಕ್ ಅಪರ್ಚರ್ ರೇಡಾರ್’. ಇದರ  ಸಂಕ್ಷಿಪ್ತರೂಪವೇ ‘ನಿಸಾರ್’. 

‘ನಿಸಾರ್‌’ ಉಪಗ್ರಹವನ್ನು ಶ್ರೀಹರಿಕೋಟದಿಂದ ಜುಲೈ 30ರಂದು ಸಂಜೆ 5.40ಕ್ಕೆ ಉಡ್ಡಯನ ಮಾಡಲು ಇಸ್ರೊ ಸಜ್ಜಾಗಿದ್ದು, ಕ್ಷಣಗಣನೆ ಆರಂಭವಾಗಿದೆ.

ದೇಶೀಯವಾಗಿಯೇ ಅಭಿವೃದ್ಧಿಪಡಿಸಿರುವ ಜಿಎಸ್‌ಎಲ್‌ವಿ–ಎಫ್‌16 ರಾಕೆಟ್‌ ಬಳಸಿ ಈ ಉಪಗ್ರಹವನ್ನು ಉಡ್ಡಯನ ಮಾಡಲಾಗುತ್ತದೆ ಎಂದು ಇಸ್ರೊ ಮೂಲಗಳು ಹೇಳಿವೆ.

‘ನಿಸಾರ್‌’ ಕಾರ್ಯಕ್ರಮದಿಂದ ತಾಂತ್ರಿಕತೆ ವಿನಿಮಯ ಭವಿಷ್ಯದ ಅಂತರಿಕ್ಷ ಅನ್ವೇಷಣೆ ಕುರಿತು ನಾಸಾ ಹಾಗೂ ಇಸ್ರೊ ನಡುವೆ ಮಾಹಿತಿ ಹಂಚಿಕೊಳ್ಳುವಿಕೆ ಸಾಧ್ಯವಾಗಲಿದೆ
ರಾಧಾಕೃಷ್ಣ ಕವುಲೂರು ಇಸ್ರೊದ ಮಾಜಿ ವಿಜ್ಞಾನಿ

‘ನಿಸಾರ್‌’ ಉಪಗ್ರಹದ ಪ್ರಯೋಜನಗಳು

*ಅಂಟಾರ್ಕ್ಟಿಕಾ ಉತ್ತರ ಧ್ರುವ ಹಾಗೂ ಸಮುದ್ರಗಳ ಕುರಿತು ವಿಸ್ತೃತ ದತ್ತಾಂಶ ರವಾನೆ

* ಇಸ್ರೊ ಈ ಮೊದಲು ಉಡ್ಡಯನ ಮಾಡಿರುವ ಉಪಗ್ರಹಗಳು (ರಿಸೋರ್ಸ್‌ಸ್ಯಾಟ್ ರಿಸ್ಯಾಟ್) ಭಾರತವನ್ನು ಕೇಂದ್ರೀಕರಿಸಿದ ಚಿತ್ರಗಳನ್ನು ಮಾತ್ರ ಕಳುಹಿಸುತ್ತವೆ. ‘ನಿಸಾರ್‌’ ಉಪಗ್ರಹವು ಇಡೀ ಭೂಮಂಡಲಕ್ಕೆ ಸಂಬಂಧಿಸಿದ ಚಿತ್ರ ದತ್ತಾಂಶ ಕಳುಹಿಸಲಿದೆ

* ವಿವಿಧ ದೇಶಗಳು ಹಾಗೂ ಸಂಘಟನೆಗಳು ಈ ಉಪಗ್ರಹ ಕಳುಹಿಸುವ ದತ್ತಾಂಶ ಬಳಸಿಕೊಳ್ಳಬಹುದು

* ಕಾಲಗಳಲ್ಲಿನ ಬದಲಾವಣೆ ಪರ್ವತಗಳ ಸ್ಥಳಾಂತರ ಹಿಮಾಲಯ ಶ್ರೇಣಿ ಅಂಟಾರ್ಕ್ಟಿಕಾದಂತಹ ಪ್ರದೇಶಗಳಲ್ಲಿ ಕಂಡುಬರುವ ನೀರ್ಗಲ್ಲುಗಳ ಚಲನವಲನಗಳ ಮೇಲೆ ಕಣ್ಗಾವಲಿಡಲು ನೆರವು

- ವೈಶಿಷ್ಟ್ಯಗಳು

* ‘ನಿಸಾರ್‌’ ಉಪಗ್ರಹವು ಇಡೀ ಭೂಮಿಯನ್ನು 12 ದಿನಗಳಲ್ಲಿ ಸುತ್ತಿ ದತ್ತಾಂಶ ಸಂಗ್ರಹಿಸಲಿದೆ

* ಉಪಗ್ರಹದ ಕಾರ್ಯಾಚರಣೆ ಅವಧಿ ಐದು ವರ್ಷ

* ಜಿಎಸ್‌ಎಲ್‌ವಿ–ಎಫ್‌16 ರಾಕೆಟ್‌ ಬಳಸಿ ಉಡ್ಡಯನ. ರಾಕೆಟ್‌ನ ಎತ್ತರ 51.7 ಮೀಟರ್

ಎಲ್ಲಿ ಉಡ್ಡಯನ?

ಶ್ರೀಹರಿಕೋಟದಲ್ಲಿರುವ 2ನೇ ಉಡ್ಡಯನ ನೆಲೆಯಿಂದ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ. ಈ ನೆಲೆಯು ಚೆನ್ನೈನಿಂದ 135 ಕಿ.ಮೀ. ದೂರದಲ್ಲಿದೆ. ಉಡ್ಡಯನಗೊಂಡು 19 ನಿಮಿಷಗಳ ನಂತರ ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.