ADVERTISEMENT

ಯುವ ಘಟಕದಿಂದ ಅಧ್ಯಕ್ಷ ಸ್ಥಾನದತ್ತ: ನಿತಿನ್‌ ನಬೀನ್‌ ಸಾಗಿ ಬಂದ ಹಾದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸಲಿರುವ ಕಿರಿಯ ನಾಯಕ

ಪಿಟಿಐ
Published 20 ಜನವರಿ 2026, 0:00 IST
Last Updated 20 ಜನವರಿ 2026, 0:00 IST
ನಿತಿನ್‌ ನಬೀನ್‌
ನಿತಿನ್‌ ನಬೀನ್‌   

ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ನಿತಿನ್‌ ನಬೀನ್‌ (45) ಅವರು, ಈ ಹುದ್ದೆ ಅಲಂಕರಿಸಲಿರುವ ಅತಿ ಚಿಕ್ಕ ವಯಸ್ಸಿನ ನಾಯಕ ಎನಿಸಿಕೊಳ್ಳಲಿದ್ದಾರೆ.

ತನ್ನ 26ನೇ ವಯಸ್ಸಿನಲ್ಲಿಯೇ ಶಾಸಕರಾಗಿ ಆಯ್ಕೆಯಾದ ಅವರು ಅಲ್ಪ ಅವಧಿಯಲ್ಲಿಯೇ ಏಳಿಗೆ ಸಾಧಿಸಿ ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದಾರೆ. ಇದೀಗ ಬಿಜೆಪಿಯ ಅತ್ಯುನ್ನತ ಹುದ್ದೆ ಅಲಂಕರಿಸಲೂ ಅವರಿಗೆ ವೇದಿಕೆ ಸಜ್ಜಾಗಿದೆ. 

ಮುಂದಿನ ಪೀಳಿಗೆಗೆ ನಾಯಕತ್ವ ಹಸ್ತಾಂತರಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ತನ್ನ ರಾಜಕೀಯ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಬಿಜೆಪಿ ಎದುರುನೋಡುತ್ತಿದೆ. 

ADVERTISEMENT

ಬಿಹಾರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾದ ಅವರು ಅಲ್ಲಿನ ಲೋಕೋಪಯೋಗಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರನ್ನು 2025ರ ಡಿಸೆಂಬರ್‌ 14ರಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.   

ನಿತಿನ್‌ ಅವರ ತಂದೆ ನವೀನ್‌ ಕಿಶೋರ್‌ ಸಿನ್ಹಾ ಅವರು ಆರ್‌ಎಸ್‌ಎಸ್‌ ಜತೆಗೆ ನಿಕಟ ಸಂಬಂಧ ಹೊಂದಿದ್ದರು. ತಂದೆಯ ನಿಧನದ ಬಳಿಕ 2006ರಲ್ಲಿ ಪಟ್ನಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಅವರು ರಾಜಕೀಯ ಪ್ರವೇಶಿಸಿದರು. ಆಗ ಅವರು ಮೊದಲ ಬಾರಿಗೆ ಶಾಸಕರಾದರು. 

ಕಾಯಸ್ಥ ಜಾತಿಗೆ ಸೇರಿದ ಅವರು, ಬಂಕಿಪುರ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು. 

2023ರ ನವೆಂಬರ್‌ನಲ್ಲಿ ನಡೆದ ಛತ್ತೀಸಗಢ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಹ ಉಸ್ತುವಾರಿಯಾಗಿ, ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದರು. ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಅವರ ಯಶಸ್ಸಿನ ಸೂತ್ರ ಪುನರಾವರ್ತನೆಯಾಯಿತು. ಇದರ ಪರಿಣಾಮ ರಾಜ್ಯದ 11 ಸ್ಥಾನಗಳಲ್ಲಿ ಬಿಜೆಪಿಗೆ 10 ಸ್ಥಾನಗಳು ದೊರೆತವು.  

ಜಾರ್ಖಂಡ್‌ನ ರಾಂಚಿಯಲ್ಲಿ ಜನಿಸಿದ ನಿತಿನ್‌ ಅವರ ಪತ್ನಿ ದೀಪಮಾಲಾ ಶ್ರೀವಾಸ್ತವ. ಈ ದಂಪತಿ ಒಬ್ಬ ಮಗ ಮತ್ತು ಮಗಳನ್ನು ಹೊಂದಿದ್ದಾರೆ. 

ತಕ್ಷಣದ ಸವಾಲುಗಳು: ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ನಿತಿನ್‌ ಅವರು ಹಲವು ಸವಾಲುಗಳು ಎದುರಾಗಲಿವೆ. ಅವುಗಳಲ್ಲಿ ಏಪ್ರಿಲ್‌ನಲ್ಲಿ ನಡೆಯಲಿರುವ ತಮಿಳುನಾಡು, ಕೇರಳ ಮತ್ತು ಅಸ್ಸಾಂ ಸೇರಿದಂತೆ ಹಲವು ಚುನಾವಣೆಗಳು ಪ್ರಮುಖವಾಗಿವೆ. ಇಲ್ಲಿ ಅವರು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. 

ಇಲ್ಲಿವರೆಗಿನ ಬಿಜೆಪಿ ಅಧ್ಯಕ್ಷರು: 1980ರಲ್ಲಿ ಬಿಜೆಪಿ ರಚನೆಯಾದ ಬಳಿಕ ಅಟಲ್‌ ಬಿಹಾರಿ ವಾಜಪೇಯಿ ಮೊದಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 1986ರಲ್ಲಿ ಲಾಲ್‌ ಕೃಷ್ಣ ಅಡ್ವಾಣಿ ಅವರು ಮೂರು ಅವಧಿಗೆ ಈ ಹುದ್ದೆ ಅಲಂಕರಿಸಿದ್ದರು. ಬಳಿಕ ಮುರಳಿ ಮನೋಹರ ಜೋಶಿ, ಕುಶಭಾವು ಠಾಕ್ರೆ, ಬಂಗಾರು ಲಕ್ಷ್ಮಣ್‌, ಜನ ಕೃಷ್ಣಮೂರ್ತಿ, ವೆಂಕಯ್ಯ ನಾಯ್ಡು, ರಾಜನಾಥ ಸಿಂಗ್‌ (ಎರಡು ಬಾರಿ), ನಿತಿನ್‌ ಗಡ್ಕರಿ, ಅಮಿತ್‌ ಶಾ ಅವರು ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2020ರಿಂದ ಜೆ.ಪಿ.ನಡ್ಡಾ ಅವರು ಈ ಹುದ್ದೆಯಲ್ಲಿದ್ದಾರೆ.