ADVERTISEMENT

2024ಕ್ಕೆ ಪ್ರಧಾನಿ ಅಭ್ಯರ್ಥಿಯಾಗುವರೇ ನಿತೀಶ್‌? ನಿಷ್ಠೆ ಮೇಲೆ ಎಲ್ಲರಿಗೂ ಅನುಮಾನ

ಪಿಟಿಐ
Published 9 ಆಗಸ್ಟ್ 2022, 15:38 IST
Last Updated 9 ಆಗಸ್ಟ್ 2022, 15:38 IST
ರಾಜೀನಾಮೆ ನೀಡಿ ರಾಜಭವನದಿಂದ ಹೊರಬಂದ ನಿತೀಶ್‌
ರಾಜೀನಾಮೆ ನೀಡಿ ರಾಜಭವನದಿಂದ ಹೊರಬಂದ ನಿತೀಶ್‌    

ಪಟ್ನಾ: ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡಿರುವ ನಿತೀಶ್ ಕುಮಾರ್‌ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕೆಲ ಮಂದಿ ಮತ್ತೆ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಹಲವರು ನಿತೀಶ್‌ ಅವರ ಮೈತ್ರಿ ನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಸೇರಿದಂತೆ ಪ್ರಧಾನ ಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಹಲವು ನಾಯಕರಲ್ಲಿ ನಿತೀಶ್‌ ಅವರೂ ಒಬ್ಬರು ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

‘ನೀವು ದೇಶದ ರಾಜಕೀಯ ನಾಯಕರ ವ್ಯಕ್ತಿತ್ವಗಳನ್ನು ಮೌಲ್ಯಮಾಪನ ಮಾಡಿದರೆ, ನಿತೀಶ್ ಕುಮಾರ್ ಅವರು ಪ್ರಧಾನಿಯಾಗಲು ಅರ್ಹರು ಎನಿಸುತ್ತಾರೆ. ಇದಕ್ಕಾಗಿ ನಾವು ಇಂದು ಯಾವುದೇ ಹಕ್ಕು ಮಂಡಿಸುತ್ತಿಲ್ಲ. ಆದರೆ ಅವರು ಪ್ರಧಾನಿಯಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ’ ಎಂದು ಜೆಡಿಯು ರಾಷ್ಟ್ರೀಯ ಸಂಸದೀಯ ಮಂಡಳಿಯ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಪಾಟ್ನಾದಲ್ಲಿ ಹೇಳಿದ್ದಾರೆ.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಶರದ್ ಯಾದವ್ ಕೂಡ ನಿತೀಶ್‌ ಅವರು 2024ರ ಲೋಕಸಭೆ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಬಹುದು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜಭವನದಿಂದ ಹೊರಬಂದ ನಿತೀಶ್ ಕುಮಾರ್ ಅವರನ್ನು ಮಾಧ್ಯಮಗಳು ಈ ಬಗ್ಗೆ ಪ್ರಶ್ನೆ ಮಾಡಿದವು. ‘2024ರಲ್ಲಿ ನೀವು ಪ್ರಧಾನಿ ಅಭ್ಯರ್ಥಿಯಾಗುವಿರೇ?’ ಎಂದು ಕೇಳಲಾದ ಪ್ರಶ್ನೆಗೆ ನಿತೀಶ್‌ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

2017ರಲ್ಲಿ ಆರ್‌ಜೆಡಿ-ಜೆಡಿ (ಯು)-ಕಾಂಗ್ರೆಸ್ ಮಹಾಘಟಬಂಧನದಿಂದ ಹೊರನಡೆದು ಬಿಜೆಪಿಯೊಂದಿಗೆ ಕೈಜೋಡಿಸಿದ್ದ ನಿತೀಶ್‌ ಅವರನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ‘ಪಲ್ಟೂ ರಾಮ್’ (ಪದೇ ಪದೇ ಮೈತ್ರಿ ಬದಲಿಸುವವರು) ಎಂದು ಲೇವಡಿ ಮಾಡಿದ್ದರು.

2019ರ ಅಕ್ಟೋಬರ್‌ನಲ್ಲಿ ನಿತೀಶ್‌ ಅವರನ್ನು ‘ಗೋಸುಂಬೆ’ ಎಂದು ಬಣ್ಣಿಸಿದ್ದ ತೇಜಸ್ವಿ, ಭವಿಷ್ಯದಲ್ಲಿ ಮೈತ್ರಿ ಏರ್ಪಡುವುದನ್ನು ತಳ್ಳಿಹಾಕಿದ್ದರು.

ಬಿಹಾರದಲ್ಲಿ ಲಾಲು ಪ್ರಸಾದ್ ಅವರ ಆರ್‌ಜೆಡಿಯ ಸರ್ಕಾರ (ಜಂಗಲ್ ರಾಜ್) ವಿರುದ್ಧ ಅಭಿಯಾನ ನಡೆಸಿ, 2005 ರಲ್ಲಿ ನಿತೀಶ್‌ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. 2014ರ ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ 2013ರಲ್ಲಿ ಘೋಷಿಸಿತು. ಈ ಹಿನ್ನೆಲೆಯಲ್ಲಿ ನಿತೀಶ್‌ ಎನ್‌ಡಿಎಯಿಂದ ಹೊರಬಂದಿದ್ದರು.

ನಂತರ, ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಮಹಾಘಟಬಂಧನ ರಚಿಸಿದ ನಿತೀಶ್‌, 2015 ರಲ್ಲಿ ಮುಖ್ಯಮಂತ್ರಿಯಾಗಿದ್ದರು. 2017 ರಲ್ಲಿ ಆರ್‌ಜೆಡಿ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಅವರು ಮೈತ್ರಿ ಮುರಿದು, ಮತ್ತೆ ಎನ್‌ಡಿಎ ಸೇರಿದ್ದರು. ಮಹಾಮೈತ್ರಿಕೂಟದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂದು ಅವರು ಆರೋಪಿಸಿದ್ದರು.

‘ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ಅವರ ರಾಜಕೀಯ ಜೀವನವು ನಿಷ್ಕಳಂಕವಾಗಿದೆ. ಆದರೆ, ಅವರು ರಾಜಕೀಯ ಮಿತ್ರರನ್ನು ಪದೇ ಪದೆ ಬದಲಿಸುತ್ತಿರುವುದು ಅವರಿಗೆ ವ್ಯತಿರಿಕ್ತವಾಗಿದೆ’ ಎಂದು ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

‘ಬಿಜೆಪಿಯೇತರ ಪಕ್ಷಗಳಲ್ಲಿ ಪ್ರಧಾನಿ ಹುದ್ದೆಗೆ ಹಲವು ಸೂಕ್ತ ನಾಯಕರಿದ್ದಾರೆ. 2024ರ ಹೊತ್ತಿಗೆ ಚಿತ್ರಣ ಏನಾಗಬಹುದು ಎಂಬುದನ್ನು ಕಾದು ನೋಡಬೇಕಿದೆ’ ಎಂದು ಚತುರ್ವೇದಿ ಹೇಳಿದರು.

ಎಡಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್ ನಾಯಕರು ಬಿಹಾರದ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ಆದರೆ ನಿತೀಶ್‌ ಅವರು ಪ್ರಧಾನಿ ಅಭ್ಯರ್ಥಿಯಾಗುವರೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ.

‘ಶರದ್ ಪವಾರ್ ಮತ್ತು ಮಮತಾ ಬ್ಯಾನರ್ಜಿ ಸೇರಿದಂತೆ 2024ರಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಬಹುದಾದ ಕೆಲವೇ ನಾಯಕರಲ್ಲಿ ನಿತೀಶ್‌ ಅವರೂ ಒಬ್ಬರಾಗಬಹುದು’ ಎಂದು ಎನ್‌ಸಿಪಿ ನಾಯಕ ಮಜೀದ್ ಮೆಮನ್ ಹೇಳಿದ್ದಾರೆ. ಆದರೆ, ಪದೇ ಪದೇ ಮೈತ್ರಿ ಬದಲಾಯಿಸುವ ನಿತೀಶ್‌ ಅವರ ನಡೆಯ ಬಗ್ಗೆ ಮಜೀದ್‌ ಅವರೂ ಬೇಸರ ವ್ಯಕ್ತಪಡಿಸಿದ್ದಾರೆ.

‘ಮಮತಾ ಬ್ಯಾನರ್ಜಿಗೆ ಹೋಲಿಸಿದರೆ ನಿತೀಶ್ ಕುಮಾರ್ ಅವರು 2024ರಲ್ಲಿ ಪ್ರಧಾನಿ ಸ್ಥಾನಕ್ಕೆ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಲು ಸೂಕ್ತ ನಾಯಕರಾಗುತ್ತಾರೆ. ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕು’ ಎಂದು ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಸಂಜಯ್ ಝಾ ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.