ADVERTISEMENT

ನಿಂದನೆ, ಹಿಂಸೆ ಸಂದರ್ಭದಲ್ಲಿ ವೈದ್ಯರು ಚಿಕಿತ್ಸೆ ನಿರಾಕರಿಸಬಹುದು –ಎನ್‌ಎಂಸಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 19:03 IST
Last Updated 10 ಆಗಸ್ಟ್ 2023, 19:03 IST
 ಚಿಕಿತ್ಸೆ ನೀಡುತ್ತಿರುವ ವೈದ್ಯರು.
ಚಿಕಿತ್ಸೆ ನೀಡುತ್ತಿರುವ ವೈದ್ಯರು.   

ನವದೆಹಲಿ (ಪಿಟಿಐ): ರೋಗಿಗಳು ಅಥವಾ ಅವರ ಸಂಬಂಧಿಕರು ನಿಂದನೆ ಮತ್ತು ಹಿಂಸೆಗೆ ಮುಂದಾಗುವ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವುದನ್ನು ನಿರಾಕರಿಸುವ ಅಧಿಕಾರವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ)ವೃತ್ತಿಪರ ವೈದ್ಯರಿಗೆ ನೀಡಿದೆ.

ಆದರೆ, ರೋಗಿಯು ಇಂಥ ಪ್ರಕರಣಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಎನ್‌ಎಂಸಿ ತಿಳಿಸಿದೆ. ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳನ್ನು ತಡೆಯಲು ಈ ಕ್ರಮಕ್ಕೆ ಎನ್‌ಎಂಸಿ ಮುಂದಾಗಿದೆ.

ಅಲ್ಲದೆ, ವೈದ್ಯರು ಯಾವುದೇ ಕಂಪನಿ, ಬ್ರಾಂಡ್‌ನ ಔಷಧಗಳು ಅಥವಾ ಪರಿಕರಗಳನ್ನು ಶಿಫಾರಸು ಮಾಡುವುದು ಅಥವಾ ಅದರ ಪರ ಪ್ರಚಾರ ಕಾರ್ಯಗಳಲ್ಲಿ ತೊಡಗುವುದನ್ನು ಎನ್‌ಎಂಸಿಯು ನಿರ್ಬಂಧಿಸಿದೆ.

ADVERTISEMENT

ವೃತ್ತಿ ನಡತೆ ನಿಯಂತ್ರಣ ನಿಯಮಗಳು ಕುರಿತ ಅಧಿಸೂಚನೆ ಪ್ರಕಾರ, ನೋಂದಾಯಿತ ವೈದ್ಯರು, ಅವರ ಕುಟುಂಬದ ಸದಸ್ಯರು ಉಡುಗೊರೆ, ಸಾರಿಗೆ ಸೌಲಭ್ಯ, ಆತಿಥ್ಯ, ನಗದು ಅಥವಾ ಅನುದಾನ, ಗೌರವಧನ ಪಡೆಯಬಾರದು. ಅಲ್ಲದೆ, ಔಷಧ ಕಂಪನಿಗಳು ನೀಡುವ ಯಾವುದೇ ಮನರಂಜನಾ ಸೌಲಭ್ಯನ್ನು ಸ್ವೀಕರಿಸಬಾರದು ಎಂದು ತಿಳಿಸಿದೆ.

ಆದರೆ, ಔಷಧ ಕಂಪನಿಗಳ ಉದ್ಯೋಗಿಗಳಾಗಿ ನೋಂದಾಯಿತ ವೈದ್ಯರು ಪಡೆಯುವ ವೇತನ ಮತ್ತು ಇತರೆ ಸೌಲಭ್ಯಗಳಿಗೆ ಈ ನಿಯಮವು ಅನ್ವಯವಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ವಿಚಾರಗೋಷ್ಠಿ, ಕಾರ್ಯಾಗಾರ, ವಿಚಾರಸಂಕಿರಣ, ಸಮ್ಮೇಳನ ಸೇರಿದಂತೆ ಕಂಪನಿಗಳಿಂದ ಪ್ರತ್ಯಕ್ಷ, ಪರೋಕ್ಷವಾಗಿ ಪ್ರಾಯೋಜಿತಗೊಂಡಿರುವ ಕಾರ್ಯಕ್ರಮಗಳಲ್ಲಿ ನೋಂದಾಯಿತ ವೈದ್ಯರು ಭಾಗವಹಿಸಬಾರದು ಎಂದು ಸೂಚಿಸಿದೆ.

ಚಿಕಿತ್ಸೆಗೆ ಮೊದಲೇ ಸರ್ಜರಿ, ಚಿಕಿತ್ಸೆಗೆ ತಗುಲುವ ವೆಚ್ಚದ ಕುರಿತ ಮಾಹಿತಿಯನ್ನು ರೋಗಿಗಳಿಗೆ ನೀಡಬೇಕು. ಹಾಗೆಯೇ, ರೋಗಿಯ ಚಿಕಿತ್ಸೆಗೂ ಮೊದಲೇ ಶುಲ್ಕದ ವಿವರವನ್ನು ನೀಡಿರಬೇಕು ಎಂದು ತಿಳಿಸಿದೆ.

ರೋಗಿಗೆ ಚಿಕಿತ್ಸೆ ನೀಡುವ ನೋಂದಾಯಿತಿ ವೈದ್ಯರು, ತಾವು ನೀಡುವ ಚಿಕಿತ್ಸೆಗೆ ಪೂರ್ಣ ಹೊಣೆಗಾರರಾಗಿದ್ದು, ಅದರ ಶುಲ್ಕ ಪಡೆಯಲು ಅರ್ಹರಾಗಿರುತ್ತಾರೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.