
ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಿಗೊಳಿಸುವ ಕುರಿತು ವಿರೋಧ ಪಕ್ಷಗಳು ನೋಟಿಸ್ ನೀಡಿವೆ. ಆದರೆ, ಸಂಸದೀಯ ಇತಿಹಾಸ ಅವಲೋಕಿಸಿದಾಗ, ಈ ಹಿಂದೆ ಇಂತಹ ಯಾವ ಪ್ರಯತ್ನಗಳು ಯಶಸ್ವಿಯಾದ ನಿದರ್ಶನಗಳು ಇಲ್ಲ ಎಂಬುದು ಗೊತ್ತಾಗುತ್ತದೆ.
ಇಂತಹ ನೋಟಿಸ್‌ಗೆ ಕನಿಷ್ಠ ಇಬ್ಬರು ಲೋಕಸಭಾ ಸಂಸದರು ಸಹಿ ಹಾಕುವುದು ಕಡ್ಡಾಯ. ಚರ್ಚೆ ಬಳಿಕ, ಸರಳ ಬಹುಮತದೊಂದಿಗೆ ಸದನ ಠರಾವು ಅನುಮೋದಿಸುವ ಮೂಲಕ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವುದಕ್ಕೆ ಸಂವಿಧಾನದ 94(ಸಿ) ವಿಧಿ ಅವಕಾಶ ನೀಡುತ್ತದೆ.
‘ಸದನದ ಒಟ್ಟು ಸದಸ್ಯರ ಸಂಖ್ಯೆಯನ್ನು ಪರಿಗಣಿಸಲಾಗುತ್ತದೆ. ಸದನದಲ್ಲಿ ಹಾಜರಿರುವ ಹಾಗೂ ಮತ ಚಲಾಯಿಸುವ ಸದಸ್ಯರ ಸಂಖ್ಯೆಯನ್ನು ಅಲ್ಲ. ಇದು ಸಾಮಾನ್ಯ ಪ್ರಕ್ರಿಯೆ’ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ.ಆಚಾರಿ ಹೇಳಿದ್ದಾರೆ.
‘ನೋಟಿಸ್ ಅನ್ನು ಕೂಲಂಕಷವಾಗಿ ಪರಿಶಿಲಿಸಲಾಗುತ್ತದೆ ಹಾಗೂ ಅದರಲ್ಲಿ ನಿರ್ದಿಷ್ಟವಾದ ಆರೋಪಗಳನ್ನು ಉಲ್ಲೇಖಿಸಲಾಗಿದೆಯೇ ಎಂಬುದು ಗಮನಿಸಲಾಗುತ್ತದೆ. ನಿರ್ದಿಷ್ಟ ಆರೋಪಗಳಿದ್ದಾಗ ಮಾತ್ರ ಸ್ಪೀಕರ್ ಅದಕ್ಕೆ ಉತ್ತರಿಸಲು ಸಾಧ್ಯ’ ಎಂದು ಅವರು, ‘ನಿರ್ಣಯವು ಅವಹೇಳನಕಾರಿ ಭಾಷೆ ಅಥವಾ ಅಂಥ ವಿಷಯವಸ್ತು ಒಳಗೊಂಡಿರಬಾರದು’ ಎಂದರು.
ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಸ್ಪೀಕರ್ ಅವರಿಗೆ ಸಂವಿಧಾನದ 96ನೇ ವಿಧಿಯು ಅವಕಾಶ ನೀಡುತ್ತದೆ ಎಂದೂ ಆಚಾರಿ ಹೇಳಿದರು.
ನೆಹರೂ ಕಾರ್ಯವೈಖರಿ ನೆನೆದ ಕಾಂಗ್ರೆಸ್
ಲೋಕಸಭಾ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವುದು ಸೇರಿ ಸಂಸದೀಯ ನಡವಳಿಕೆಗೆ ಸಂಬಂಧಿಸಿ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ನಡೆದುಕೊಳ್ಳುತ್ತಿದ್ದ ರೀತಿಯನ್ನು ಕಾಂಗ್ರೆಸ್ ಪಕ್ಷ ಮಂಗಳವಾರ ಸ್ಮರಿಸಿದೆ.
‘1954ರಲ್ಲಿ ಆಗಿನ ಸ್ಪೀಕರ್ ಪದಚ್ಯುತಿ ಕುರಿತ ನೋಟಿಸ್‌ಗೆ ಸಂಬಂಧಿಸಿ ವಿಸ್ತೃತವಾಗಿ ಚರ್ಚೆ ನಡೆಸಲು ವಿಪಕ್ಷಗಳಿಗೆ ಹೆಚ್ಚು ಸಮಯ ನೀಡುವಂತೆ ನೆಹರೂ ಹೇಳಿದ್ದರು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.