ADVERTISEMENT

ಕ್ಷೇತ್ರ ಮರುವಿಂಗಡಣೆ ಕುರಿತು ನಿರ್ಧಾರವೇ ಆಗಿಲ್ಲ: ಸಂಘರ್ಷ ಶಮನಕ್ಕೆ ಸಚಿವರ ಯತ್ನ

ಕೇಂದ್ರ ಸಚಿವರಾದ ಕಿಶನ್‌ ರೆಡ್ಡಿ, ಬಂಡಿ ಸಂಜಯ ಅವರಿಂದ ಸಂಘರ್ಷ ಶಮನ ಯತ್ನ

​ಪ್ರಜಾವಾಣಿ ವಾರ್ತೆ
ಪಿಟಿಐ
Published 15 ಮಾರ್ಚ್ 2025, 14:32 IST
Last Updated 15 ಮಾರ್ಚ್ 2025, 14:32 IST
ಜಿ.ಕಿಶನ್‌ ರೆಡ್ಡಿ
ಜಿ.ಕಿಶನ್‌ ರೆಡ್ಡಿ   

ಹೈದರಾಬಾದ್/ಕರೀಮ್‌ನಗರ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕಾರ್ಯ ಕೈಗೊಳ್ಳುವ ಕುರಿತಂತೆ ಯಾವ ನಿರ್ಧಾರವನ್ನೂ ಮಾಡಿಲ್ಲ. ಈ ವಿಚಾರವಾಗಿ ಯಾವುದೇ ಮಾರ್ಗಸೂಚಿಗಳನ್ನೂ ರಚಿಸಲಾಗಿಲ್ಲ ಎಂದು ಕೇಂದ್ರ ಸಚಿವರಾದ ಜಿ.ಕಿಶನ್‌ ರೆಡ್ಡಿ ಹಾಗೂ ಬಂಡಿ ಸಂಜಯ ಕುಮಾರ್ ಶನಿವಾರ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಎಲ್ಲ ಭಾಷೆಗಳನ್ನೂ ಪ್ರೋತ್ಸಾಹಿಸುತ್ತಿದೆ. ಆದರೆ, ಈ ವಿಚಾರ ಮುಂದಿಟ್ಟುಕೊಂಡು ಜನರನ್ನು ಪ್ರಚೋದಿಸುವ ರಾಜಕೀಯ ಪ್ರೇರಿತ ಪ್ರಯತ್ನಗಳು ವಿಫಲವಾಗಲಿವೆ’ ಎಂದು ಉಭಯ ಸಚಿವರು ಪ್ರತಿಪಾದಿಸಿದ್ದಾರೆ.

ಸುದ್ದಿಗಾರರ ಜೊತೆ ಪ್ರತ್ಯೇಕವಾಗಿ ಮಾತನಾಡಿರುವ ಅವರು, ಕ್ಷೇತ್ರಗಳ ಮರುವಿಂಗಡಣೆ ಹಾಗೂ ಹಿಂದಿ ಹೇರಿಕೆ ವಿಚಾರವಾಗಿ ಕಂಡುಬಂದಿರುವ ಸಂಘರ್ಷ ಶಮನ ಮಾಡುವ ಪ್ರಯತ್ನಗಳನ್ನು ಮಾಡಿದ್ದಾರೆ.

ADVERTISEMENT

ಹೈದರಾಬಾದ್‌ನಲ್ಲಿ ಮಾತನಾಡಿದ ಸಚಿವ ಕಿಶನ್‌ ರೆಡ್ಡಿ, ಹಿಂದಿ ಹೇರಿಕೆ ವಿಚಾರವಾಗಿ ತಮಿಳನಾಡಿನಲ್ಲಿ ವ್ಯಕ್ತವಾಗುತ್ತಿರುವ ವಿರೋಧ ಕುರಿತು ಪ್ರಸ್ತಾಪಿಸಿದರು.

‘ದಕ್ಷಿಣ ಭಾರತದ ಚಲನಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಕಾಣುತ್ತಿವೆ. ಅದರಲ್ಲೂ, ತಮಿಳು ಹಾಗೂ ತೆಲುಗು ಚಿತ್ರಗಳು ಉತ್ತರ ಭಾರತದಲ್ಲಿ ಜನಪ್ರಿಯವಾಗಿವೆ. ಚಿತ್ರಗಳ ಹಿಂದಿ ಅವತರಣಿಕೆಗಳಿಂದ ಭಾರಿ ಆದಾಯವೂ ಲಭಿಸಿದೆ’ ಎಂದರು.

‘ತೆಲಂಗಾಣ ರಾಜ್ಯ ಬಹುಸಂಸ್ಕೃತಿಯ ನೆಲೆ. ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಲ್ಲಿನ ಪ್ರಗತಿಗೂ ಕೊಡುಗೆ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಐದು ವರ್ಷಗಳಲ್ಲಿ ತಾವು ಮಾಡಿರುವ ಸಾಧನೆಗಳನ್ನು ಹೇಳಲಿ’ ಎಂದು ಸವಾಲು ಹಾಕಿದ ಅವರು, ‘ತಮ್ಮ ವೈಫಲ್ಯಗಳನ್ನು ಮರೆಮಾಚುವುದಕ್ಕಾಗಿ ಅವರು ಕ್ಷೇತ್ರಗಳ ಮರುವಿಂಗಡಣೆ, ಭಾಷೆಯಂತ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ’ ಎಂದರು.

ಕರೀಮ್‌ನಗರದಲ್ಲಿ ಮಾತನಾಡಿದ ಸಚಿವ ಬಂಡಿ ಸಂಜಯ ಕುಮಾರ್‌,‘ದಕ್ಷಿಣ ಭಾರತ ಕುರಿತು ಕೇಂದ್ರ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂಬ ಆರೋಪಗಳು ಆಧಾರರಹಿತ ಹಾಗೂ ಹಾಸ್ಯಾಸ್ಪದ’ ಎಂದರು.

‘ತಮಿಳುನಾಡು, ಕರ್ನಾಟಕ, ತೆಲಂಗಾಣ ರಾಜ್ಯ ಸರ್ಕಾರಗಳು ಎಲ್ಲ ರಂಗಗಳಲ್ಲಿ ವಿಫಲವಾಗಿದ್ದು, ಇಲ್ಲಿನ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಈ ರಾಜ್ಯಗಳಲ್ಲಿನ ಆಡಳಿತಾರೂಢ ಪಕ್ಷಗಳು ವಿವಾದಗಳನ್ನು ಸೃಷ್ಟಿಸುವುದು ಹಾಗೂ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನದಲ್ಲಿ ನಿರತವಾಗಿವೆ’ ಎಂದೂ ಟೀಕಿಸಿದರು.

ತಮಿಳು ಹೊಗಳಿದ ವೈಷ್ಣವ್

ಚೆನ್ನೈ: ‘ತಮಿಳು ಸುಮಧುರವಾದ ಭಾಷೆ. ದೇಶದ ಮತ್ತು ವಿಶ್ವದ ಆಸ್ತಿಗಳಲ್ಲೊಂದು. ದೇಶದ ಪ್ರತಿಯೊಂದು ಭಾಷೆಯೂ ತನ್ನ ಗೌರವ ಸಿಗುವುದನ್ನು ಪ್ರಧಾನಿ ನರೇಂದ್ರ ಮೋದಿ ಖಾತ್ರಿಪಡಿಸಿದ್ದಾರೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.

ಶ್ರೀಪೆರಂಬದೂರುವಿನಲ್ಲಿ ಜೆಟ್‌ವೆರ್ಕ್ ಎಲೆಕ್ಟ್ರಾನಿಕ್ಸ್ ಕಂಪನಿಯ ಉತ್ಪಾದನಾ ಘಟಕದ ಉದ್ಘಾಟನಾ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಭಿಕರನ್ನು ಉದ್ದೇಶಿಸಿ ‘ವಣಕ್ಕಂ’ ಎಂದು ತಮಿಳಿನಲ್ಲಿ ಹೇಳುವ ಮೂಲಕ ಮಾತು ಆರಂಭಿಸಿದರು.

‘ನಾನು ಐಐಟಿ–ಕಾನ್ಪುರದಲ್ಲಿ ಅಧ್ಯಯನ ಮಾಡುತ್ತಿದ್ದಾಗ, ನಮ್ಮ ಪ್ರಾಧ್ಯಾಪಕರಾಗಿದ್ದ ಸಡಗೋಪನ್ ತಮಿಳು ಭಾಷೆ ಕುರಿತು ನನಗೆ ತಿಳಿಸಿಕೊಟ್ಟರು’ ಎಂದರು.  

‘ತಮಿಳು ಸುಮಧುರವಾದ ಭಾಷೆ. ವಣಕ್ಕಂ, ಎಪ್ಪಡಿ ಇರುಕ್ಕುಂಗಾ (ಹೇಗಿದ್ದೀರಿ) ಹಾಗೂ ನಂಡ್ರಿ(ಧನ್ಯವಾದ) ಎಂಬ ಮೂರು ಪದಗಳು ನನಗೆ ಗೊತ್ತು’ ಎಂದರು.

ದಕ್ಷಿಣ ರಾಜ್ಯಗಳ ಕುರಿತು ಕೇಂದ್ರ ಸರ್ಕಾರ ಸಂವೇದನಾರಹಿತವಾಗಿದೆ. ಎಲ್ಲ ಭಾಷೆಗಳಿಗೂ ಸಮಾನ ಮಹತ್ವ ನೀಡಬೇಕು.
-ಪ್ರಕಾಶ ಕಾರಟ್, ಸಿಪಿಎಂ ನಾಯಕ
ರಾಜಕೀಯ ಲಾಭ ಪಡೆಯುವುದಕ್ಕಾಗಿ ಡಿಎಂಕೆ ಪಕ್ಷ ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ಸಭೆ ಕರೆದಿದೆ.
-ಇ.ಕೆ.ಪಳನಿಸ್ವಾಮಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.