ADVERTISEMENT

ಉಪಗ್ರಹ ಆಧಾರಿತ ಟೋಲ್ ಸಂಗ್ರಹ ಸದ್ಯಕ್ಕಿಲ್ಲ: ಕೇಂದ್ರ ಸರ್ಕಾರ

ಪಿಟಿಐ
Published 18 ಏಪ್ರಿಲ್ 2025, 14:36 IST
Last Updated 18 ಏಪ್ರಿಲ್ 2025, 14:36 IST
ಫಾಸ್ಟ್ಯಾಗ್‌
ಫಾಸ್ಟ್ಯಾಗ್‌   

ನವದೆಹಲಿ: ‘ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯನ್ನು ದೇಶದಾದ್ಯಂತ ಮೇ 1 ರಿಂದ ಜಾರಿಗೊಳಿಸುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಸ್ಪಷ್ಟಪಡಿಸಿದೆ.

ಮೇ 1ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಆಗಿರುವ ಹಿನ್ನಲೆಯಲ್ಲಿ ಸಚಿವಾಲಯ ಈ ಸ್ಪಷ್ಟನೆ ನೀಡಿದೆ. ಹಾಲಿ ಬಳಕೆಯಲ್ಲಿರುವ ಫಾಸ್ಟ್ಯಾಗ್‌ ಬದಲಿಗೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ವರದಿಯಾಗಿತ್ತು. 

ಸಚಿವಾಲಯ ಈ ಕುರಿತು ನೀಡಿರುವ ಹೇಳಿಕೆಯಲ್ಲಿ, ‘ಸ್ವಯಂಚಾಲಿತ ವ್ಯವಸ್ಥೆಯಡಿ ವಾಹನಗಳ ನೋಂದಣಿ ಸಂಖ್ಯೆ ಗುರುತಿಸಿ, ಟೋಲ್‌ ಸಂಗ್ರಹಿಸುವ ನೂತನ ವ್ಯವಸ್ಥೆಯನ್ನು ಆಯ್ದ ಟೋಲ್‌ ಪ್ಲಾಜಾಗಳಲ್ಲಿ ಜಾರಿಗೊಳಿಸಲಾಗುವುದು’ ಎಂದು ತಿಳಿಸಿದೆ.

ADVERTISEMENT

ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಮತ್ತು ಟೋಲ್‌ ಪ್ಲಾಜಾಗಳಲ್ಲಿ ಪ್ರಯಾಣದ ಅವಧಿ ತಗ್ಗಿಸುವುದು ಇದರ ಉದ್ದೇಶ. ಹೊಸ ವ್ಯವಸ್ಥೆಯಡಿ ನೋಂದಣಿ ಸಂಖ್ಯೆ ಗುರುತಿಸುವ ಎಎನ್‌ಪಿಆರ್ ತಂತ್ರಜ್ಞಾನ ಮತ್ತು ಟೋಲ್‌ ಸಂಗ್ರಹಕ್ಕಾಗಿ ಹಾಲಿ ಬಳಕೆಯಲ್ಲಿರುವ ‘ಫಾಸ್ಟ್ಯಾಗ್‌ ವ್ಯವಸ್ಥೆ’ ಒಟ್ಟಿಗೆ ಕಾರ್ಯನಿರ್ವಹಿಸಲಿವೆ ಎಂದೂ ಸಚಿವಾಲಯವು ವಿವರಿಸಿದೆ.

ನೂತನ ವ್ಯವಸ್ಥೆಯಡಿ ಉನ್ನತ ಸಾಮರ್ಥ್ಯದ ಕ್ಯಾಮೆರಾ ಬಳಸಿ ಗುರುತಿಸಲಾದ ನೋಂದಣಿ ಸಂಖ್ಯೆಗೆ ಅನುಗುಣವಾಗಿ, ಫಾಸ್ಟ್ಯಾಗ್ ಮೂಲಕ ಟೋಲ್ ಕಡಿತವಾಗಲಿದೆ. ಇದಕ್ಕಾಗಿ ಟೋಲ್‌ ಪ್ಲಾಜಾದಲ್ಲಿ ವಾಹನ ನಿಲುಗಡೆ ಮಾಡುವ ಅಗತ್ಯವಿಲ್ಲ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.