ADVERTISEMENT

ಬಹುಪತ್ನಿತ್ವವು ಅಭ್ಯರ್ಥಿಯ ಆಯ್ಕೆ ಅನೂರ್ಜಿತಗೊಳಿಸಲು ಕಾರಣವಲ್ಲ:ಬಾಂಬೆ ಹೈಕೋರ್ಟ್‌

ಶಿವಸೇನಾ ಶಾಸಕ ರಾಜೇಂದ್ರ ಗವಿತ್‌ ಆಯ್ಕೆಯನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್‌

ಪಿಟಿಐ
Published 24 ಜೂನ್ 2025, 16:01 IST
Last Updated 24 ಜೂನ್ 2025, 16:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ಬಹುಪತ್ನಿತ್ವ’ವು ಅಭ್ಯರ್ಥಿಯ ಆಯ್ಕೆಯನ್ನು ಅನೂರ್ಜಿತಗೊಳಿಸಲು ಮಾನದಂಡವಲ್ಲ ಎಂದು ಅಭಿಪ್ರಾಯಪಟ್ಟಿರುವ ಬಾಂಬೆ ಹೈಕೋರ್ಟ್‌, (ಏಕನಾಥ ಶಿಂದೆ ಬಣ) ಪಾಲ್ಘರ್‌ ಕ್ಷೇತ್ರದ ಶಿವಸೇನಾ ಶಾಸಕ ರಾಜೇಂದ್ರ ಗವಿತ್‌ ಗೆಲುವು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

‘ವೈವಾಹಿಕ ಸ್ಥಿತಿ ಕುರಿತು ಪ್ರಾಮಾಣಿಕವಾಗಿ ಘೋಷಣೆ ಮಾಡುವುದು ಚುನಾವಣಾ ಕಾನೂನಿನ ಉಲ್ಲಂಘನೆಯಾಗುವುದಿಲ್ಲ’ ಎಂದು ತಿಳಿಸಿದೆ.

‘ಭಿಲ್‌ ಬುಡಕಟ್ಟು ಸಂಪ್ರದಾಯದ ಪ್ರಕಾರ, ಬಹುಪತ್ನಿತ್ವವನ್ನು ನಿರ್ಬಂಧಿಸಿಲ್ಲ. ಇಬ್ಬರೂ ಪತ್ನಿಯರ ಮಾಹಿತಿ ಚುನಾವಣಾ ಅಫಿಡವಿತ್‌ನಲ್ಲಿ ಉಲ್ಲೇಖಿಸಿದ್ದು, ಪ್ಯಾನ್‌ಕಾರ್ಡ್‌, ಆದಾಯ ತೆರಿಗೆ ಸಲ್ಲಿಕೆಯ ಮಾಹಿತಿಯನ್ನು ನೀಡಿದ್ದಾರೆ’ ಎಂದು ಗವಿತ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್‌ ಮಾರ್ನೆ ತಿಳಿಸಿದರು.

ADVERTISEMENT

‘ನಿರ್ದಿಷ್ಟ ಧರ್ಮದ ಅಭ್ಯರ್ಥಿಯಾಗಿದ್ದರೆ, ಬಹುಪತ್ನಿತ್ವಕ್ಕೆ ಅವಕಾಶವಿದ್ದು, ಹಲವು ವಿವಾಹಗಳನ್ನು ಮಾಡಿಕೊಳ್ಳುತ್ತಾರೆ’ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದರು.

‘ಬಹುಪತ್ನಿತ್ವದ ಕುರಿತು ಚುನಾವಣಾ ಅಫಿಡವಿತ್‌ನಲ್ಲಿ ಸೇರಿಸುವ ಕಾಲಂ ಹೊಂದಿದ್ದರೆ, ಅಂತಹ ಅಭ್ಯರ್ಥಿಗಳು ಯಾವುದೇ ಸಂದರ್ಭದಲ್ಲಿಯೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವೇ ಇಲ್ಲ’ ಎಂದು ನ್ಯಾಯಾಲಯವು ಸೋಮವಾರ ಪ್ರಕಟಿಸಿದ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

‘ಹಿಂದೂ ವಿವಾಹ ಕಾಯ್ದೆ ಪ್ರಕಾರ, ಗವಿತ್‌ ಅವರ ಎರಡನೇ ವಿವಾಹವು ಅನೂರ್ಜಿತವಾಗಿದೆ. ಎರಡನೇ ಪತ್ನಿ ರೂಪಾಲಿ ಗವಿತ್‌ ಕುರಿತು ಸುಳ್ಳು ಘೋಷಣೆ ಮಾಡಿದ್ದಾರೆ. ಹೀಗಾಗಿ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು’ ಎಂದು ಕೋರಿ ಪಾಲ್ಘರ್‌ನ ಮತದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧೀರ್‌ ಜೈನ್‌ ಅರ್ಜಿ ಸಲ್ಲಿಸಿದ್ದರು.

‘ಸ್ವಯಂಪ್ರೇರಿತವಾಗಿ ಹಾಗೂ ಸತ್ಯವನ್ನು ಅರ್ಜಿಯಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ. ಬುಡಕಟ್ಟು ಸಮುದಾಯದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದ್ದು, ಕಾನೂನಿನಡಿಯಲ್ಲಿ ಸ್ವಯಂಪ್ರೇರಿತವಾಗಿ ಮಾಹಿತಿ ಒದಗಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ’ ಎಂದು ಶಾಸಕ ಗವಿತ್‌ ಪರ ವಕೀಲರು ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.