ರಾಜೇಂದ್ರ ವಿಶ್ವನಾಥ ಅರ್ಲೇಕರ್
(ಪಿಟಿಐ ಚಿತ್ರ)
ತಿರುವನಂತಪುರ: ‘ಭಾರತ ಮಾತೆಯ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾನದಂಡ ಇಲ್ಲದ ಕಾರಣ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅದನ್ನು ಬಳಸಲು ಅನುಮತಿ ನೀಡಲಾಗದು’ ಎಂದು ಕೇರಳದ ಎಡಪಂಥೀಯ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.
ರಾಜಭವನದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದನ್ನು ಕಾರ್ಯಕ್ರಮ ಪಟ್ಟಿಗೆ ಸೇರಿಸಲು ರಾಜಭವನ ಒತ್ತಾಯಿಸಿತ್ತು. ಆದರೆ ಅದನ್ನು ನಿರಾಕರಿಸಿ, ಕಾರ್ಯಕ್ರಮವನ್ನು ರಾಜ್ಯ ಕೃಷಿ ಇಲಾಖೆ ಬೇರೆಡೆಗೆ ಸ್ಥಳಾಂತರಿಸಿತ್ತು.
ಇದರ ಬೆನ್ನಲ್ಲೇ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದ್ದು, ಭಾರತ ಮಾತೆಯ ಭಾವಚಿತ್ರ ಹಾಗೂ ಅದಕ್ಕೆ ಸಂಬಂಧಿಸಿದ ಮಾನದಂಡಗಳ ಬಗ್ಗೆ ಸಂವಿಧಾನವಾಗಲಿ, ಭಾರತ ಸರ್ಕಾರವಾಗಲಿ ಅಧಿಕೃತವಾಗಿ ತಿಳಿಸಿಲ್ಲ ಎಂದು ಹೇಳಿದೆ.
ರಾಜೀ ಇಲ್ಲ– ರಾಜ್ಯಪಾಲ:
ವಿವಾದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್, ‘ಭಾರತ ಮಾತೆಯ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ’ ಎಂದು ಹೇಳಿದ್ದಾರೆ.
ಕೃಷಿ ಸಚಿವ ಕಿಡಿ:
‘ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಸರ್ಕಾರಿ ಕಾರ್ಯಕ್ರಮಗಳನ್ನು ರಾಜಕೀಯ ಕಾರ್ಯಕ್ರಮಗಳಾಗಿ ಪರಿವರ್ತಿಸಬಾರದು’ ಎಂದು ಕೇರಳ ಕೃಷಿ ಸಚಿವ ಪಿ. ಪ್ರಸಾದ್ ಅವರು ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ರಾಜಭವನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ, ಆರ್‌ಎಸ್‌ಎಸ್ ಬಳಸುವ ಭಾರತ ಮಾತೆಯ ಭಾವಚಿತ್ರ ಬಳಸಲಾಗಿತ್ತು. ಅದರಲ್ಲಿ ಭಾರತದ ಧ್ವಜ ಇರಲಿಲ್ಲ. ರಾಜಕೀಯ ಸಂಘಟನೆಯ ಧ್ವಜವನ್ನು ಅದು ಹೊಂದಿತ್ತು. ಹೀಗಾಗಿ ಪುಷ್ಪನಮನ ಸಲ್ಲಿಸಲಿಲ್ಲ’ ಎಂದು ಸಚಿವ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.