ಚಂದ್ರಶೇಖರ್ ಬಾವಂಕುಲೆ
ಮುಂಬೈ: ಒಬ್ಬ ವ್ಯಕ್ತಿ 75 ವರ್ಷಕ್ಕೆ ನಿವೃತ್ತಿ ಹೊಂದಬೇಕು ಎಂದು ಪಕ್ಷದಲ್ಲಿ ಯಾವುದೇ ನಿಯಮವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯನ್ನು ದೇಶದ ಜನರು ನಿರ್ಧರಿಸುತ್ತಾರೆ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬಾವಂಕುಲೆ ಹೇಳಿದ್ದಾರೆ.
ಪ್ರಧಾನಿ ಸ್ಥಾನದಿಂದ ನಿವೃತ್ತಿಯಾಗುವ ಸಂದೇಶವನ್ನು ನೀಡಲು ಮೋದಿ ಅವರು ಭಾನುವಾರ ಆರ್‌ಎಸ್ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು ಎಂಬ ಶಿವಸೇನಾ (ಯುಬಿಟಿ ಬಣ) ಮುಖಂಡ ಸಂಜಯ್ ರಾವುತ್ ಅವರ ಹೇಳಿಕೆಯನ್ನು ಬಾವಂಕುಲೆ ‘ರಾಜಕೀಯ ತಂತ್ರ’ ಎಂದು ಕರೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘75ರ ನಂತರ ಪ್ರಧಾನಿ ಮೋದಿ ಅವರು ರಾಜಕೀಯದಿಂದ ನಿವೃತ್ತರಾಗಬೇಕು ಎಂಬ ನಿಯಮ ಬಿಜೆಪಿಯಲ್ಲಿ ಇಲ್ಲ. ಅಂತಹ ಯಾವುದೇ ನಿರ್ಧಾರವೂ ಇಲ್ಲ. ಭಾರತೀಯ ಸಂವಿಧಾನವು ಕೂಡ ಅಂತಹ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ’ ಎಂದು ಬಾವಂಕುಲೆ ಹೇಳಿದ್ದಾರೆ.
‘ಅಟಲ್ ಬಿಹಾರಿ ವಾಜಪೇಯಿ ಅವರು 79 ವರ್ಷಗಳವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಮೊರಾರ್ಜಿ ದೇಸಾಯಿ ಅವರು 83 ವರ್ಷಗಳವರೆಗೆ ಮತ್ತು ಡಾ.ಮನಮೋಹನ ಸಿಂಗ್ 81 ವರ್ಷಗಳವರೆಗೆ ಪ್ರಧಾನಿಯಾಗಿದ್ದರು. ಇವರೆಲ್ಲರೂ 75 ವರ್ಷಗಳನ್ನು ದಾಟಿ ಪ್ರಧಾನಿ ಹುದ್ದೆಯಲ್ಲಿದ್ದರು. ಬಿಜೆಪಿ ಮೇಲಿನ ದ್ವೇಷದಿಂದ ಕುರುಡರಾಗಿರುವ ರಾವುತ್ ಇದನ್ನು ಮರೆತಂತೆ ತೋರುತ್ತಿದೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಭಾರತೀಯ ಪ್ರಜಾಪ್ರಭುತ್ವದಲ್ಲಿ, ಪ್ರಧಾನ ಮಂತ್ರಿಯ ಅಧಿಕಾರಾವಧಿಯನ್ನು ಚುನಾವಣಾ ಆದೇಶ ಮತ್ತು ಸಾರ್ವಜನಿಕ ಬೆಂಬಲದಿಂದ ನಿರ್ಧರಿಸಲಾಗುತ್ತದೆ. ರಾವುತ್ ಅವರಂತಹ ವ್ಯಕ್ತಿಗಳಿಂದಲ್ಲ. ದೇಶದ ಜನರು ಮೋದಿ ಅವರ ಪ್ರಧಾನಿ ಹುದ್ದೆಯ ಅಧಿಕಾರಾವಧಿಯನ್ನು ನಿರ್ಧರಿಸುತ್ತಾರೆ. ಸಂಜಯ್ ರಾವುತ್ ಅಥವಾ ವಿರೋಧ ಪಕ್ಷಗಳಲ್ಲ’ ಎಂದು ಬಾವಂಕುಲೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.