ADVERTISEMENT

₹36ಲಕ್ಷ ವರದಕ್ಷಿಣೆಗಾಗಿ ಮಹಿಳೆಯ ಕೂದಲು ಹಿಡಿದು ಎಳೆದಾಡಿ, ಬೆಂಕಿ ಹಚ್ಚಿ ಕೊಂದರು!

ಪಿಟಿಐ
Published 24 ಆಗಸ್ಟ್ 2025, 2:25 IST
Last Updated 24 ಆಗಸ್ಟ್ 2025, 2:25 IST
   

ನೋಯ್ಡಾ: ‘ನನ್ನ ಅಮ್ಮನ ಮೈಮೇಲೆ ಏನೋ ಸುರಿದರು, ಕೆನ್ನೆಗೆ ಹೊಡೆದು ಲೈಟರ್‌ನಲ್ಲಿ ಬೆಂಕಿ ಹಚ್ಚಿದರು...’ ಹೀಗೆ ಆರು ವರ್ಷದ ಪೋರನೊಬ್ಬ ತನ್ನ ತಾಯಿಯನ್ನು ಕೊಂದ ಬಗೆಯನ್ನು ವಿವರಿಸಿದ್ದಾನೆ.

ವರದಕ್ಷಿಣೆ ಹಣಕ್ಕಾಗಿ ಕುಟುಂಬವೊಂದು ಮಹಿಳೆಯನ್ನು ಆಕೆಯ ಸಹೋದರಿ ಮತ್ತು ಮಗನ ಕಣ್ಣೆದುರಿನಲ್ಲೇ ಹಲ್ಲೆ ಮಾಡಿ, ಕೂದಲು ಹಿಡಿದು ಎಳೆದಾಡಿ ಬೆಂಕಿ ಹಚ್ಚಿ ಕೊಂದ ಘಟನೆ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ. ಸದ್ಯ ಪೊಲೀಸರು ಮಹಿಳೆಯ ಪತಿಯನ್ನು ಬಂಧಿಸಿದ್ದು, ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ನಿಕ್ಕಿ ಮೃತ ಮಹಿಳೆ. ಈಕೆಯ ಮೇಲೆ ಹಲ್ಲೆ ಮಾಡಿರುವ ಮತ್ತು ಬೆಂಕಿ ಹಚ್ಚಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. 

ADVERTISEMENT

ನಿಕ್ಕಿ ಅವರ ಅಕ್ಕ ಕಾಂಚನಾ ಘಟನೆಯ ದೃಶ್ಯವನ್ನು ವಿಡಿಯೊ ಮಾಡಿದ್ದು, ಗ್ರೇಟರ್ ನೋಯ್ಡಾದ ಕಾಸ್ನಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಚನಾ, ‘ಪತಿ ಮತ್ತು ಅತ್ತೆ–ಮಾವ ಅಕ್ಕನನ್ನು ₹36 ಲಕ್ಷ ವರದಕ್ಷಿಣೆ ಹಣಕ್ಕಾಗಿ ಕೊಂದಿದ್ದಾರೆ. ಅವರು ವರದಕ್ಷಿಣೆಗಾಗಿ ಹಲವು ದಿನಗಳಿಂದ ಹಿಂಸಿಸುತ್ತಿದ್ದರು. ನನ್ನ ಅಕ್ಕನ ಕುತ್ತಿಗೆ, ತಲೆಗೆ ಹೊಡೆದಿದ್ದಾರೆ, ಆ್ಯಸಿಡ್‌ಅನ್ನು ಎರಚಿದ್ದಾರೆ, ನನಗೂ ಚಿತ್ರಹಿಂಸೆ ನೀಡಿದ್ದಾರೆ, ನನ್ನಿಂದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ’ ಎಂದು ಅಕ್ಕನ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಕಣ್ಣೀರಾದರು. 

ಘಟನೆಯ ಕುರಿತು ವಿವರಿಸಿರುವ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಸುಧೀರ್ ಕುಮಾರ್, ‘ಆ.21ರಂದು ಫೋರ್ಟೀಸ್‌ ಆಸ್ಪತ್ರೆಯಿಂದ ಮಹಿಳೆಯೊಬ್ಬರು ಸುಟ್ಟ ಗಾಯಗಳಿಂದ ದಾಖಲಾಗಿರುವ ಬಗ್ಗೆ ಮಾಹಿತಿ ಬಂದಿತ್ತು, ನಮ್ಮ  ತಂಡ ಅಲ್ಲಿಗೆ ತಲುಪುವಷ್ಟರಲ್ಲಿ ಮಹಿಳೆ ಮೃತರಾಗಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮಹಿಳೆಯ ಅಕ್ಕ ಕಾಂಚನಾ ಅವರು ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಸದ್ಯ ಮಹಿಳೆಯ ‍ಪತಿಯನ್ನು ಬಂಧಿಸಲಾಗಿದೆ, ಕುಟುಂಬದ ಇತರ ಸದಸ್ಯರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.