
ಡೆಹ್ರಾಡೂನ್ (ಉತ್ತಾರಖಂಡ): ನಗರದಲ್ಲಿ ಜನಾಂಗೀಯ ದಾಳಿಯಿಂದ ಹತ್ಯೆಗೊಳಗಾದ ತ್ರಿಪುರಾದ ವಿದ್ಯಾರ್ಥಿ ಅಂಜೆಲ್ ಛಕ್ಮಾ (24) ತಂದೆಯ ಜೊತೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸೋಮವಾರ ಮಾತುಕತೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದರು.
ಅಂಜೆಲ್ ತಂದೆ ತರುಣ್ ಪ್ರಸಾದ್ ಛಕ್ಮಾ ಜೊತೆಗೆ ಮುಖ್ಯಮಂತ್ರಿ ಅವರು ದೂರವಾಣಿ ಸಂಭಾಷಣೆ ನಡೆಸಿದರು.
‘ಘಟನೆಗೆ ಬೇಸರ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬದ ಜೊತೆಗೆ ರಾಜ್ಯ ಸರ್ಕಾರವು ನಿಲ್ಲಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ನೇಪಾಳಕ್ಕೆ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೂ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.
ತರುಣ್ ಪ್ರಸಾದ್ ಅವರು ಬಿಎಸ್‌ಎಫ್ ಯೋಧರಾಗಿದ್ದು, ಮಣಿಪುರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಮಗ್ರ ಪ್ರಯತ್ನ ಅಗತ್ಯ: ‘ಈಶಾನ್ಯ ರಾಜ್ಯದ ಜನರ ಮೇಲೆ ನಡೆಯುತ್ತಿರುವ ದ್ವೇಷ ಅಪರಾಧಗಳನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸಮಗ್ರ ಪ್ರಯತ್ನ ಅಗತ್ಯವಿದೆ’ ಎಂದು ರಾಜಕೀಯ ಪಕ್ಷಗಳ ಮುಖಂಡರು ಆಗ್ರಹಿಸಿದ್ದಾರೆ.
‘ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ನ್ಯಾಯ ಸಿಗುವುದನ್ನು ಖಾತರಿಪಡಿಸಬೇಕು’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
‘ಇದು ರಾಷ್ಟ್ರೀಯ ಅವಮಾನವಾಗಿದ್ದು, ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಈಶಾನ್ಯ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಮಾತನಾಡಬೇಕು. ಮೌನವು ಕೂಡ ತೊಡಕು’ ಎಂದು ತಿರುವನಂತಪುರ ಸಂಸದ ಶಶಿ ತರೂರ್ ಹೇಳಿದ್ದಾರೆ.
ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ಕುರಿತು ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನ ನೀಡಲಾಗುವುದು ಎಂದು ತಿಪ್ರಾ ಮೊಥಾ ಮುಖ್ಯಸ್ಥ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ರಮಾ ಘೋಷಿಸಿದ್ದು, ಸಂತ್ರಸ್ತ ವಿದ್ಯಾರ್ಥಿ ಕುಟುಂಬ ಸದಸ್ಯರಿಗೆ ₹3 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.