ADVERTISEMENT

ವಿಷಾನಿಲದಿಂದ ತತ್ತರಿಸಿದ ಉತ್ತರ ಭಾರತದ ಜನ

ರಾಯಿಟರ್ಸ್
Published 15 ನವೆಂಬರ್ 2020, 10:16 IST
Last Updated 15 ನವೆಂಬರ್ 2020, 10:16 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಚೆನ್ನೈ: ದೀಪಾವಳಿಯ ಸಂಭ್ರಮದಲ್ಲಿ ಮಿಂದು ಮಲಗಿದ್ದ ಉತ್ತರ ಭಾರತದ ಲಕ್ಷಾಂತರ ಮಂದಿಗೆ ಭಾನುವಾರ ಬೆಳಿಗ್ಗೆ ಕಣ್ಣು ಬಿಟ್ಟೊಡನೆಯೇ ವಿಷಾನಿಲ ತಮ್ಮ ದೇಹ ಸೇರುತ್ತಿರುವ ಅನುಭವವಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಕೆಲವರು ಸರ್ಕಾರಗಳ ಆದೇಶವನ್ನೂ ಉಲ್ಲಂಘಿಸಿ ವಿಪರೀತ ಪಟಾಕಿ ಸಿಡಿಸಿದ್ದರು. ಇದರಿಂದಾಗಿ ವಾತಾವರಣದಲ್ಲಿನ ಗಾಳಿ ಕಲುಷಿತಗೊಂಡಿತ್ತು.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮುಂಜಾನೆ ದಟ್ಟ ಹೊಂಜು ಆವರಿಸಿತ್ತು. ಹಬ್ಬದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಪಟಾಕಿ ತಯಾರಿಕೆ ಹಾಗೂ ಬಳಕೆಯನ್ನು ನಿಷೇಧಿಸಿದ್ದರು. ಆದರೂ, ಸರ್ಕಾರದ ಈ ಆದೇಶವನ್ನು ಹಲವರು ದಿಕ್ಕರಿಸಿದರು.

ADVERTISEMENT

ರೈತರು ಭಾರಿ ಪ್ರಮಾಣದಲ್ಲಿ ಕೃಷಿ ಭೂಮಿಯ ತ್ಯಾಜ್ಯವನ್ನು ಸುಟ್ಟಿದ್ದರಿಂದ ಅಕ್ಟೋಬರ್‌ ಮತ್ತು ನವೆಂಬರ್‌ ಆರಂಭದಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಿತ್ತು. ಇದು ಕೋವಿಡ್‌ ವಿರುದ್ಧದ ಹೋರಾಟಕ್ಕೆ ಅಡ್ಡಿಯಾಗುತ್ತಿದೆ ಎಂದು ರಾಜಧಾನಿಯ ವೈದ್ಯರು ಅಭಿಪ್ರಾಯಪಟ್ಟಿದ್ದರು. ಜೊತೆಗೆ ಇನ್ನಿತರ ಮಾರಕ ರೋಗಗಳ ಉಲ್ಬಣಕ್ಕೂ ಇದು ದಾರಿ ಮಾಡಿಕೊಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಬೆಳಕಿನ ಹಬ್ಬದ ಹಿನ್ನೆಲೆಯಲ್ಲಿ ಅತಿಯಾದ ಪಟಾಕಿ ಸುಟ್ಟಿದ್ದರಿಂದ ಉತ್ತರ ಪ್ರದೇಶ, ಪಂಜಾಬ್‌, ಹರಿಯಾಣ ಮತ್ತು ಬಿಹಾರ ರಾಜ್ಯದ ಪ್ರಮುಖ ನಗರಗಳಲ್ಲೂ ಗಾಳಿಯ ಗುಣಮಟ್ಟ ಕುಸಿದಿತ್ತು. ಹೋದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ ಎಂಬುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.