ADVERTISEMENT

ಕ್ರಿಸ್‌ಮಸ್‌ ಆಚರಣೆ | ಯೋಧರ ತ್ಯಾಗವನ್ನು ಮರೆಯದಿರೋಣ: ಡಿ.ವೈ. ಚಂದ್ರಚೂಡ್‌

ಪಿಟಿಐ
Published 25 ಡಿಸೆಂಬರ್ 2023, 15:37 IST
Last Updated 25 ಡಿಸೆಂಬರ್ 2023, 15:37 IST
ಸುಪ್ರೀಂ ಕೋರ್ಟ್‌ ವಕೀಲರ ಸಂಘ ಸೋಮವಾರ ಆಯೋಜಿಸಿದ್ದ ಕ್ರಿಸ್‌ಮಸ್‌ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌   –ಪಿಟಿಐ ಚಿತ್ರ
ಸುಪ್ರೀಂ ಕೋರ್ಟ್‌ ವಕೀಲರ ಸಂಘ ಸೋಮವಾರ ಆಯೋಜಿಸಿದ್ದ ಕ್ರಿಸ್‌ಮಸ್‌ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌   –ಪಿಟಿಐ ಚಿತ್ರ   

ನವದೆಹಲಿ: ‘ನಾವು ಕ್ರಿಸ್‌ಮಸ್‌ ಆಚರಿಸುತ್ತಿರುವ ವೇಳೆ, ದೇಶದ ಗಡಿಗಳಲ್ಲಿ ನಿಂತು ತಮ್ಮ ಪ್ರಾಣ ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಿರುವ ಸಶಸ್ತ್ರ ಪಡೆ ಸಿಬ್ಬಂದಿಯ ತ್ಯಾಗವನ್ನು ಮರೆಯಬಾರದು’ ಎಂದು ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ಸೋಮವಾರ ಹೇಳಿದರು.

ಸುಪ್ರೀಂ ಕೋರ್ಟ್‌ ವಕೀಲರ ಸಂಘ ಆಯೋಜಿಸಿದ್ದ ಕ್ರಿಸ್‌ಮಸ್‌ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಈಚೆಗಷ್ಟೇ ನಾಲ್ವರು ಯೋಧರನ್ನು ಹತ್ಯೆಗೈದ ಘಟನೆ ಹಿನ್ನಲೆಯಲ್ಲಿ ಮಾತನಾಡಿದ ಅವರು, ‘ಸಶಸ್ತ್ರ ಪಡೆ ಯೋಧರು ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸುತ್ತಾರೆ, ನಾವು ಕೂಡಾ ದೇಶಕ್ಕಾಗಿ ಎಲ್ಲವನ್ನೂ ತ್ಯಾಗಮಾಡಲು ಸಿದ್ಧರಿರೋಣ. ಕ್ರಿಸ್‌ಮಸ್‌ಗಾಗಿ ಹಾಡುವಾಗ ಅವರಿಗಾಗಿಯೂ ಹಾಡೋಣ’ ಎಂದರು.

ಇತರರ ಏಳಿಗೆಗಾಗಿ ತ್ಯಾಗಮಾಡುವುದೇ ಯೇಸು ಕ್ರಿಸ್ತನ ಜೀವನದ ಸಂದೇಶವಾಗಿದೆ ಎಂದರು. ವಕೀಲರ ಸಂಘದ ಸದಸ್ಯರಿಗಾಗಿ ಕಚೇರಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಈ ವೇಳೆ ಹೇಳಿದರು.

ADVERTISEMENT

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಅಹ್ಸಾದುದ್ದೀನ್‌ ಅಮಾನುಲ್ಲಾ ಹಾಗೂ ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಆದಿಶ್‌ ಸಿ. ಅಗರ್ವಾಲ್‌ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.