ಅಲಹಾಬಾದ್ ಹೈಕೋರ್ಟ್ ಹಾಗೂ ನ್ಯಾಯಮೂರ್ತಿ ಯಶವಂತ ವರ್ಮಾ
– ಪಿಟಿಐ ಚಿತ್ರಗಳು
ಅಲಹಾಬಾದ್: ‘ಅಲಹಾಬಾದ್ ಹೈಕೋರ್ಟ್ ಕಸದ ಬುಟ್ಟಿಯೇ?‘
ಮನೆಯಲ್ಲಿ ಭಾರಿ ಪ್ರಮಾಣದ ಹಣ ಪತ್ತೆಯಾದ ಬೆನ್ನಲ್ಲೇ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ ವರ್ಮಾರನ್ನು ವರ್ಗಾವಣೆ ಮಾಡಿದ ಕ್ರಮಕ್ಕೆ ಅಲಹಾಬಾದ್ ಹೈಕೋರ್ಟ್ ವಕೀಲರು ಪ್ರತಿಕ್ರಿಯಿಸಿದ ಪರಿಯಿದು.
ಹೋಳಿ ಆಚರಣೆ ವೇಳೆ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ತೆರಳಿದ ಅಗ್ನಿಶಾಮಕ ಅಧಿಕಾರಿಗಳಿಗೆ ₹ 15 ಕೋಟಿ ನಗದು ಇರುವುದು ಪತ್ತೆಯಾಗಿತ್ತು. ಇದು ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.
ಈ ಬಗ್ಗೆ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವ ಹೈಕೋರ್ಟ್‌ನ ಬಾರ್ ಸಂಘವು, ‘ಕೊಲಿಜಿಯಂನ ಈ ನಿರ್ಧಾರದಿಂದ ಅಚ್ಚರಿಗೊಂಡಿದ್ದೇವೆ’ ಎಂದು ಹೇಳಿದೆ.
‘ಕೊಲಿಜಿಯಂನ ಈ ನಿರ್ಧಾರ ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಅಲಹಾಬಾದ್ ಹೈಕೋರ್ಟ್ ಕಸದ ಬುಟ್ಟಿಯೇ? ಸದ್ಯದ ಪರಿಸ್ಥಿತಿ ಗಮನಿಸುವಾಗ ಈ ವಿಷಯ ಮುಖ್ಯವೆನಿಸುತ್ತದೆ. ಅಲಹಾಬಾದ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆ ಇದೆ. ಹೊಸ ನ್ಯಾಯಮೂರ್ತಿಗಳ ನೇಮಕವಾಗದೆ ಸುಮಾರು ವರ್ಷಗಳಾಗಿವೆ’ ಎಂದು ಪತ್ರದಲ್ಲಿ ಹೇಳಲಾಗಿದೆ.
ನ್ಯಾಯಮೂರ್ತಿಗಳಾಗಿ ಬಾರ್‌ನ ಸದಸ್ಯರನ್ನು ನೇಮಕ ಮಾಡುವಾಗಲೂ ಬಾರ್ ಜೊತೆ ಸಮಾಲೋಚನೆ ನಡೆಸುವುದಿಲ್ಲ ಎನ್ನುವುದು ಕೂಡ ತೀವ್ರ ಕಳವಳಕಾರಿ. ಅರ್ಹರನ್ನು ಪರಿಗಣಿಸುವುದಿಲ್ಲ ಎಂದು ತೋರುತ್ತದೆ. ಇಲ್ಲಿ ಏನೋ ಕೊರತೆಯಿದೆ. ಇದು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಗೆ ಹಾನಿಯಾಗಿದೆ ಎಂದು ಬಾರ್ ಪತ್ರದಲ್ಲಿ ನುಡಿದಿದೆ.
ಇವೆಲ್ಲಾ ಗಮನಿಸಿದರೆ ಅಲಹಾಬಾದ್ ಹೈಕೋರ್ಟ್ ಅನ್ನು ವಿಭಜಿಸುವ ಪಿತೂರಿ ಎದ್ದು ಕಾಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸುರುವ ಬಾರ್, ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸೋಮವಾರ ಸಭೆ ಸೇರುವುದಾಗಿ ಹೇಳಿದೆ.
(ವಿವಿಧ ಮೂಲಗಳನ್ನು ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.