ADVERTISEMENT

ಅನಿವಾಸಿ ಭಾರತೀಯರಿಗೆ ಅಂಚೆ ಮತಪತ್ರ: ಚುನಾವಣಾ ಆಯೋಗ ಚಿಂತನೆ

ಪಿಟಿಐ
Published 11 ಸೆಪ್ಟೆಂಬರ್ 2025, 16:00 IST
Last Updated 11 ಸೆಪ್ಟೆಂಬರ್ 2025, 16:00 IST
   

ತಿರುವನಂತಪುರ: ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಅಂಚೆ ಮತಪತ್ರಗಳ ಮೂಲಕ ತಮ್ಮ ಹಕ್ಕು ಚಲಾಯಿಸುವ ಅವಕಾಶ ಕಲ್ಪಿಸಲು ಚುನಾವಣಾ ಆಯೋಗ ಪರಿಗಣಿಸುತ್ತಿದೆ. 

ಅಲ್ಲದೇ, ಈ ರೀತಿ ಹಕ್ಕು ಚಲಾವಣೆಯ ಸೌಲಭ್ಯ ಒದಗಿಸಬೇಕು ಎಂಬುದು ಕೂಡ ಎನ್‌ಆರ್‌ಐಗಳ ಬಹುದಿನಗಳ ಬೇಡಿಕೆಯೂ ಆಗಿತ್ತು. ಈಗ ಈ ನಿಟ್ಟಿನಲ್ಲಿ ಆಯೋಗ ಒಂದು ಹೆಜ್ಜೆ ಇಟ್ಟಿದೆ.

‘ಅನಿವಾಸಿ ಭಾರತೀಯರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡುವ ಸೌಲಭ್ಯ ಕಲ್ಪಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಚುನಾವಣಾ ಆಯೋಗವು, ಮುಂದಿನ ವರ್ಷ ಕೇರಳ ವಿಧಾನಸಭೆಗೆ ನಡೆಯುವ ಚುನಾವಣೆಗೆ ಮುನ್ನವೇ ಈ ವ್ಯವಸ್ಥೆ ಜಾರಿಗೊಳಿಸುವ ಸಾಧ್ಯತೆ ಇದೆ’ ಎಂದು ಕೇರಳ ಮುಖ್ಯ ಚುನಾವಣಾಧಿಕಾರಿ ರತನ್ ಯು.ಕೇಳ್ಕರ್‌ ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದ್ದಾರೆ.

ADVERTISEMENT

ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವ ಹಕ್ಕು ನೀಡಬೇಕು ಎಂಬ ಬೇಡಿಕೆ ಮುಂದಿಡಲು ಕಾರಣವೂ ಇದೆ. ಅದರಲ್ಲೂ, ಕಳೆದ ವಿಧಾನಸಭೆ ಚುನಾವಣೆ ವೇಳೆ ಇಂತಹ ಸೌಲಭ್ಯ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟವರಲ್ಲಿ ಕೇರಳದವರೇ ಅಧಿಕ ಎಂಬುದು ವಿಶೇಷ.

ಒಟ್ಟು ಎನ್‌ಆರ್‌ಐಗಳ ಸಂಖ್ಯೆ ಅಂದಾಜು 1.36 ಕೋಟಿ ಇದ್ದು, ಈ ಪೈಕಿ ಕಳೆದ ವರ್ಷದ ಲೋಕಸಭಾ ಚುನಾವಣೆ ವೇಳೆ 1,19,374 ಎನ್‌ಆರ್‌ಐಗಳು ಮಾತ್ರ ಮತ ಚಲಾವಣೆ ಸಂಬಂಧ ನೋಂದಣಿ ಮಾಡಿದ್ದರು. ಈ ನೋಂದಾಯಿತ ಮತದಾರರಲ್ಲಿ ಕೇರಳಿಗರ ಸಂಖ್ಯೆ 89,839 ಇತ್ತು.

ಈ ಪೈಕಿ, ಕೇರಳದ 2,670 ಜನರು ಸೇರಿ 2,958 ಎನ್‌ಆರ್‌ಐಗಳು ಮಾತ್ರ ಭಾರತಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿದ್ದರು. 

ಎನ್‌ಆರ್‌ಐಗಳ ಸ್ವಾಗತ: ಅಂಚೆ ಮತಪತ್ರ ವ್ಯವಸ್ಥೆ ಜಾರಿಗೊಳಿಸಲು ಚುನಾವಣಾ ಆಯೋಗ ಮುಂದಾಗಿರುವುದನ್ನು ಎನ್‌ಆರ್‌ಐಗಳು ಸ್ವಾಗತಿಸಿದ್ದಾರೆ.

‘ಇದು ಸ್ವಾಗತಾರ್ಹ ನಡೆ. ಪ್ರಜಾತಾಂತ್ರಿಕ ಕಾರ್ಯದಲ್ಲಿ ಭಾಗಿಯಾಗಲು ಲಕ್ಷಾಂತರ ಅನಿವಾಸಿ ಭಾರತೀಯರಿಗೆ ಇದರಿಂದ ಅನುಕೂಲವಾಗಲಿದೆ. ಆದರೆ, ಈ ವ್ಯವಸ್ಥೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಸುರಕ್ಷಿತವಾಗಿ ಜಾರಿಗೊಳಿಸುವುದು ಅಗತ್ಯ’ ಎಐಸಿಸಿಯ ಸಾಗರೋತ್ತರ ಘಟಕದ (ಮಧ್ಯಪ್ರಾಚ್ಯ) ಸಂಚಾಲಕ ಮನ್ಸೂರ್ ಪಲ್ಲೂರ್ ಹೇಳುತ್ತಾರೆ. 

ಇ–ಮತದಾನ ಸೌಲಭ್ಯ ಕಲ್ಪಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಆದರೆ ಇದಕ್ಕೆ ಪರಿಣಾಮಕಾರಿ ವ್ಯವಸ್ಥೆ ಬೇಕು. ಇದರ ಬದಲು ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳ ಮೂಲಕ ಅಂಚೆ ಮತಪತ್ರ ಸೌಲಭ್ಯ ಒದಗಿಸುವ ಕುರಿತು ಚರ್ಚೆ ನಡೆಯುತ್ತಿದೆ
ರತನ್‌ ಕೇಳ್ಕರ್ ಕೇರಳ ಮುಖ್ಯ ಚುನಾವಣಾಧಿಕಾರಿ
ಕೇರಳದಲ್ಲಿ ಎಸ್‌ಐಆರ್‌: 20ಕ್ಕೆ ಸಭೆ
ಕೇರಳದಲ್ಲಿ ಶೀಘ್ರವೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಸಂಬಂಧ ಚರ್ಚಿಸಲು ಇದೇ 20ರಂದು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ರತನ್‌ ಕೇಳ್ಕರ್ ಹೇಳಿದ್ದಾರೆ. '2002ರಲ್ಲಿ ನಡೆಸಿದ್ದ ಎಸ್‌ಐಆರ್‌ ನಂತರ ಸಿದ್ಧಪಡಿಸಲಾದ ಮತದಾರರ ಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಎಸ್‌ಐಆರ್‌ ನಡೆಸುವ ಕುರಿತಂತೆ ಎಲ್ಲ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಲಾಗಿದೆ. ಆಯೋಗದಿಂದ ಸೂಚನೆ ಬಂದ ಕೂಡಲೇ ಎಸ್‌ಐಆರ್‌ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.