ADVERTISEMENT

NEET-UG 2024: ಪ್ರಕರಣ ಮುಕ್ತಾಯಗೊಳಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 7 ಏಪ್ರಿಲ್ 2025, 13:11 IST
Last Updated 7 ಏಪ್ರಿಲ್ 2025, 13:11 IST
.
.   

ನವದೆಹಲಿ: ಕಳೆದ ವರ್ಷದ ನೀಟ್‌–ಯುಜಿ ಪರೀಕ್ಷೆ ಸಂದರ್ಭದಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಕಾರ್ಯವೈಖರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಮುಕ್ತಾಯಗೊಳಿಸಿದೆ.

ತಾನು ನೇಮಿಸಿರುವ ತಜ್ಞರ ಸಮಿತಿಯು ನೀಟ್‌–ಯುಜಿ ಪರೀಕ್ಷೆಗೆ ಸಂಬಂಧಿಸಿದಂತೆ ಸೂಚಿಸಿರುವ ಸುಧಾರಣೆಗಳನ್ನು ಜಾರಿಗೆ ತರುವ ಭರವಸೆಯನ್ನು ಕೇಂದ್ರ ಸರ್ಕಾರವು ನೀಡಿದ್ದರಿಂದ ಸುಪ್ರೀಂ ಕೋರ್ಟ್‌ ಈ ನಿರ್ಧಾರ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ವಿಷಯದ ಕುರಿತು ಕೇಂದ್ರ ಸರ್ಕಾರವು ಸಲ್ಲಿಸಿರುವ ಅನುಸರಣಾ ವರದಿ ಮತ್ತು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಮನವಿಯನ್ನು ಗಮನಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು.

ADVERTISEMENT

ಎನ್‌ಟಿಎಯು ನೀಟ್‌–ಯುಜಿಯನ್ನು ಆನ್‌ಲೈನ್‌ ಮೂಲಕ ನಡೆಸುವುದನ್ನು ಹೊರತುಪಡಿಸಿ, ಏಳು ಸದಸ್ಯರ ತಜ್ಞರ ಸಮಿತಿಯು ನೀಡಿರುವ ಎಲ್ಲಾ ಸಲಹೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು.

‘ದೇಶದಾದ್ಯಂತ 26 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್‌ ಪರೀಕ್ಷೆ ಬರೆಯುತ್ತಾರೆ. ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಬೇಕಾದರೆ ಸರ್ಕಾರವು ಇಂಟರ್ನೆಟ್‌ ಮತ್ತು ಕಂಪ್ಯೂಟರ್‌ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಆದರೆ ತಜ್ಞರ ಸಮಿತಿಯ ವರದಿಯನ್ನು ಅಂಗೀಕರಿಸಲಾಗಿದೆ. ಈ ಪ್ರಕರಣದಲ್ಲಿ ವಿಚಾರಣೆಗೆ ಇನ್ನು ಏನೂ ಉಳಿದಿಲ್ಲ, ಅರ್ಜಿಯನ್ನು ವಿಲೇವಾರಿ ಮಾಡಬಹುದು’ ಎಂದು ಮೆಹ್ತಾ ಹೇಳಿದರು. ಮುಂದಿನ ಆದೇಶದ ಅಗತ್ಯವಿಲ್ಲ ಎಂದು ಹೇಳಿದ ಪೀಠ, ಪ್ರಕರಣವನ್ನು ಮುಕ್ತಾಯಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.