ADVERTISEMENT

ಹರಿಯಾಣ | ನೂಹ್‌ನಲ್ಲಿ ಕೋಮು ಘರ್ಷಣೆ, ಎಸ್‌ಪಿ ವರುಣ್‌ ಸಿಂಗ್ಲಾ ಎತ್ತಂಗಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2023, 4:39 IST
Last Updated 4 ಆಗಸ್ಟ್ 2023, 4:39 IST
ವರುಣ್ ಸಿಂಗ್ಲಾ
ವರುಣ್ ಸಿಂಗ್ಲಾ    

ಗುರುಗ್ರಾಮ: ನೂಹ್‌ ಜಿಲ್ಲೆಯಲ್ಲಿ ನಡೆದ ಕೋಮು ಘರ್ಷಣೆ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಸಿಂಗ್ಲಾ ಅವರನ್ನು ವರ್ಗಾವಣೆ ಮಾಡಿ ಹರಿಯಾಣ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಸಿಂಗ್ಲಾ ಅವರನ್ನು ಭಿವಾನಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ) ಎನ್. ಪ್ರಸಾದ್ ಅವರು ಆಗಸ್ಟ್ 3ರಂದು (ಗುರುವಾರ) ಹೊರಡಿಸಿದ ಆದೇಶದ ಪ್ರಕಾರ, ಸಿಂಗ್ಲಾ ಅವರ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಉಸ್ತುವಾರಿ ವಹಿಸಿದ್ದ ನರೇಂದ್ರ ಬಿಜರ್ನಿಯಾ ಅವರು ನೂಹ್‌ ಜಿಲ್ಲೆಯ ಹೊಸ ಎಸ್‌ಪಿಯಾಗಲಿದ್ದಾರೆ.

ADVERTISEMENT

ನೂಹ್‌ ಪಟ್ಟಣದಲ್ಲಿ ಜುಲೈ 31 (ಸೋಮವಾರ) ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡು‌ವೆ ಘರ್ಷಣೆ ನಡೆದಿದ್ದು, ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿಯನ್ನೂ ಹಚ್ಚಿದ್ದರು.

ಕೋಮು ಗಲಭೆಯಿಂದ ಹರಿಯಾಣದಲ್ಲಿ ಗೃಹ ರಕ್ಷಕ ದಳದ ಇಬ್ಬರು ಮತ್ತು ನಾಲ್ವರು ನಾಗರಿಕರು ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ ಎಂದು ಹರಿಯಾಣದ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ತಿಳಿಸಿದ್ದಾರೆ.

ಹರಿಯಾಣದ ನೂಹ್‌ ಪಟ್ಟಣದಲ್ಲಿ ಇಂದು (ಶುಕ್ರವಾರ) ಕೂಡ ನಿಷೇಧಾಜ್ಞೆ ಮುಂದುವರಿದಿದ್ದು, ಜಿಲ್ಲೆಯಲ್ಲಿ ಇಂಟರ್‌ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ನೂಹ್‌ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ಟ್ವೀಟ್ ಮಾಡಿದೆ.

ಓದಿ... ಹರಿಯಾಣ | ನೂಹ್‌ನಲ್ಲಿ ಮುಂದುವರಿದ ನಿಷೇಧಾಜ್ಞೆ, ಇಂಟರ್‌ನೆಟ್‌ ನಿರ್ಬಂಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.