ADVERTISEMENT

ಉಡುಗೆಗಳಿಗಿಂತ ನಂಬಿಕೆಯೇ ಮುಖ್ಯ: ನೂಸ್ರತ್‌ ಜಹಾನ್‌

ಮೌಲ್ವಿಗಳ ಹೇಳಿಕೆಗೆ ಸಂಸದೆ ಕಿಡಿ

ಪಿಟಿಐ
Published 30 ಜೂನ್ 2019, 17:46 IST
Last Updated 30 ಜೂನ್ 2019, 17:46 IST
ನೂಸ್ರತ್‌ ಜಹಾನ್‌
ನೂಸ್ರತ್‌ ಜಹಾನ್‌   

ಕೋಲ್ಕತ್ತ: ‘ನಾನು ಧರಿಸುವ ಬಟ್ಟೆಗಳ ಬಗ್ಗೆ ಯಾರೂ ಹೇಳಿಕೆಗಳನ್ನು ನೀಡಬಾರದು’ ಎಂದು ಸಂಸದೆ ಮತ್ತು ನಟಿ ನೂಸ್ರತ್‌ ಜಹಾನ್‌ ಹೇಳಿದ್ದಾರೆ.

‘ಆಯ್ಕೆ ಮಾಡಿಕೊಳ್ಳುವುದು ನನ್ನ ನಿರ್ಧಾರ. ಯಾವುದೇ ಉಡುಗೆಗಳಿಗಿಂತ ನಂಬಿಕೆ ಮುಖ್ಯ’ ಎಂದು ಹೇಳಿದ್ದಾರೆ.

ಕುಂಕುಮ, ಮಂಗಳಸೂತ್ರ ಧರಿಸಿದ್ದಕ್ಕಾಗಿ ಕೆಲವು ಮುಸ್ಲಿಂ ಮೌಲ್ವಿಗಳು ಫತ್ವಾ ಹೊರಡಿಸಿರುವುದಕ್ಕೆ ನೂಸ್ರತ್‌ ಜಹಾನ್‌ ಹೀಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದ ಜಹಾನ್‌ ಮೊದಲ ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜೂನ್‌ 25ರಂದು ಕುಂಕುಮ ಮತ್ತು ಮಂಗಳಸೂತ್ರ ಧರಿಸಿ ಸಂಸತ್‌ ಭವನಕ್ಕೆ ಅವರು ಬಂದಿದ್ದರು. ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ‘ವಂದೇ ಮಾತರಂ’ ಘೋಷಣೆ ಹಾಕಿದ್ದರು.

29 ವರ್ಷದ ಜಹಾನ್‌, ಉದ್ಯಮಿ ನಿಖಿಲ್‌ ಜೈನ್‌ ಅವರನ್ನು ಟರ್ಕಿಯಲ್ಲಿ ಜೂನ್‌ 19ರಂದು ವಿವಾಹವಾಗಿದ್ದರು.

ಜೈನ್‌ ಧರ್ಮದ ವ್ಯಕ್ತಿಯನ್ನು ವಿವಾಹವಾಗುವ ಮೂಲಕ ಜಹಾನ್‌ ಇಸ್ಲಾಂಗೆ ಅಗೌರವ ತೋರಿದ್ದಾರೆ ಮತ್ತು ಅವರ ಉಡುಗೆಗಳು ಸಹ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿವೆ ಎಂದು ಮೌಲ್ವಿಗಳು ಟೀಕಿಸಿದ್ದರು.

‘ಮುಸ್ಲಿಮರು ಅವರ ಧರ್ಮದವರನ್ನೇ ವಿವಾಹಗಬೇಕು. ಇಸ್ಲಾಂನಲ್ಲಿ ವಂದೇ ಮಾತರಂ, ಮಂಗಳಸೂತ್ರ, ಕುಂಕುಮಕ್ಕೆ ಅವಕಾಶ ಇಲ್ಲ. ಇವೆಲ್ಲವೂ ಧರ್ಮದ ವಿರುದ್ಧವಾಗಿವೆ’ ಎಂದು ಜಮಿಯಾ ಶೇಖ್‌–ಉಲ್‌ ಹಿಂದ್‌ನ ಮುಫ್ತಿ ಅಸಾದ್‌ ಕಸಾಮಿ ಹೇಳಿದ್ದರು.

ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿದ್ದ ಜಹಾನ್‌, ‘ಯಾವುದೇ ಧರ್ಮದ ಮೂಲಭೂತವಾದಿಗಳಿಗೆ ಪ್ರತಿಕ್ರಿಯಿಸುವುದು ಅಥವಾ ಅವರ ಮಾತಿಗೆ ಬೆಲೆ ನೀಡುವುದರಿಂದ ದ್ವೇಷ ಮತ್ತು ಹಿಂಸಾಚಾರ ಹೆಚ್ಚುತ್ತದೆ. ಇದಕ್ಕೆ ಇತಿಹಾಸವೇ ಸಾಕ್ಷಿ’ ಎಂದು ಪ್ರತಿಕ್ರಿಯಿಸಿದ್ದರು.

***

ಒಳಗೊಳ್ಳುವಿಕೆಯ ಭಾರತದಲ್ಲಿ ನಾನಿದ್ದೇನೆ. ಜಾತಿ, ಧರ್ಮವನ್ನು ಮೀರುವುದು ಒಳಗೊಳ್ಳುವಿಕೆಯಾಗಿದೆ. ನಾನು ಇನ್ನೂ ಮುಸ್ಲಿಂ ಧರ್ಮದವಳು

- ನೂಸ್ರತ್‌ ಜಹಾನ್‌,ನಟಿ, ಸಂಸದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.