ADVERTISEMENT

ಒಡಿಶಾ: ಕಾಂಗ್ರೆಸ್‌ ವಿಪಕ್ಷ ಸ್ಥಾನವೂ ಸಿಗದು

​ಪ್ರಜಾವಾಣಿ ವಾರ್ತೆ
Published 22 ಮೇ 2019, 17:32 IST
Last Updated 22 ಮೇ 2019, 17:32 IST

ಭುವನೇಶ್ವರ: ಒಡಿಶಾದಲ್ಲಿ ತಮ್ಮ ಪಕ್ಷವು ಸರ್ಕಾರ ರಚಿಸುವುದು ಸಾಧ್ಯವಿಲ್ಲ ಮತ್ತು ಈಗ ಇರುವ ಅಧಿಕೃತ ವಿರೋಧ ಪಕ್ಷ ಸ್ಥಾನವೂ ದೊರೆಯದು ಎಂದು ಆ ರಾಜ್ಯದ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಹೇಳಿದ್ದಾರೆ.

ಹಿಂದೆ ಹಲವು ಬಾರಿ ಕಾಂಗ್ರೆಸ್‌ ಪಕ್ಷವು ಒಡಿಶಾದಲ್ಲಿ ಅಧಿಕಾರಕ್ಕೆ ಏರಿತ್ತು. ಕಳೆದ 19 ವರ್ಷಗಳಿಂದ ಅಲ್ಲಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿ ಸರ್ಕಾರವಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಈ ಬಾರಿ ಬಿಜೆಪಿ ಮತ್ತು ಬಿಜೆಡಿ ನಡುವೆ ನೇರ ಹಣಾಹಣಿ ನಡೆದಿತ್ತು. ಕಾಂಗ್ರೆಸ್‌ ಪಕ್ಷದ ಸಾಧನೆ ತೀರಾ ಕಳಪೆಯಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರ ನಡುವೆಯೇ ನಿರಂಜನ್‌ ಈ ಹೇಳಿಕೆ ಕೊಟ್ಟಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಒಡಿಶಾದಲ್ಲಿ ಕಾಂಗ್ರೆಸ್‌ ಪಕ್ಷವು ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. 147 ಸದಸ್ಯರ ವಿಧಾನಸಭೆಯಲ್ಲಿ 16 ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಿದ್ದವು. ಈ ಬಾರಿ ಒಂದು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬಹುದು, 15 ವಿಧಾನಸಭಾ ಕ್ಷೇತ್ರಗಳು ದೊರೆಯಬಹುದು ಎಂದು ಕೆಲವು ಸಮೀಕ್ಷೆಗಳು ಹೇಳಿವೆ.

ADVERTISEMENT

ನಿರಂಜನ್‌ ಅವರ ಬಗ್ಗೆ ಕಾಂಗ್ರೆಸ್‌ ಪಕ್ಷದ ಹಲವು ಮುಖಂಡರಲ್ಲಿ ಭಾರಿ ಅಸಮಾಧಾನ ಇದೆ. ಹಿರಿಯ ಮುಖಂಡ ಜಗನ್ನಾಥ ಪಟ್ನಾಯಕ್‌ ಅವರು ಪ್ರದೇಶ ಕಾಂಗ್ರೆಸ್‌ ಸಮನ್ವಯ ಸಮಿತಿಗೆ ರಾಜೀನಾಮೆ ನೀಡಿದ್ದಾರೆ. ಈಗಿನ ರಾಜ್ಯ ನಾಯಕತ್ವವು ಚುನಾವಣೆ ಎದುರಿಸಲು ಬೇಕಾದ ಸಿದ್ಧತೆಯನ್ನೇ ಮಾಡಿಕೊಂಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗಳಾದ ಶರತ್‌ ರಾವತ್‌ ಅವರೂ ನಿರಂಜನ್‌ ವಿರುದ್ಧ ಹರಿಹಾಯ್ದಿದ್ದಾರೆ.

‘ನಿರಂಜನ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ವಿಶ್ವಾಸಕ್ಕೆ ದ್ರೋಹ ಎಸಗಿದ್ದಾರೆ’ ಎಂದು ರಾವತ್‌ ಆರೋಪಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಸರಿಯಾದ ಸಿದ್ಧತೆ ನಡೆಸದಕಾರಣದಿಂದಲೇ ಬಿಜೆಪಿಗೆ ಅನುಕೂಲವಾಗಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.