ADVERTISEMENT

ಒಡಿಶಾ-ಜಾರ್ಖಂಡ್ ಗಡಿಯಲ್ಲಿ ಐಇಡಿ ಸ್ಫೋಟ: ರೈಲ್ವೆ ಸಿಬ್ಬಂದಿ ಸ್ಥಳದಲ್ಲೇ ಸಾವು

ಪಿಟಿಐ
Published 3 ಆಗಸ್ಟ್ 2025, 10:30 IST
Last Updated 3 ಆಗಸ್ಟ್ 2025, 10:30 IST
<div class="paragraphs"><p>ಸ್ಫೋಟ</p></div>

ಸ್ಫೋಟ

   

ಭುವನೇಶ್ವರ: ಒಡಿಶಾ-ಜಾರ್ಖಂಡ್ ಗಡಿ ಬಳಿಯ ರೈಲ್ವೆ ಹಳಿಯಲ್ಲಿ ಮಾವೋವಾದಿಗಳು ಹೂತಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡ ಪರಿಣಾಮ ರೈಲ್ವೆ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಇಟುವಾ ಓರಾಮ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಮಾವೋವಾದಿ ಪೋಸ್ಟರ್‌ಗಳು ಕಂಡುಬಂದಿದ್ದು, ಸ್ಫೋಟದಲ್ಲಿ ಮಾವೋವಾದಿಗಳು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ‌ಶಂಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಸುಂದರ್‌ಗಢ ಜಿಲ್ಲೆಯ ಬಿಮ್ಲಾಗಢ ವಿಭಾಗದ ಕರಂಪಾಡ ಮತ್ತು ರೆಂಜ್ಡಾವನ್ನು ಸಂಪರ್ಕಿಸುವ ರೈಲ್ವೆ ಹಳಿಗಳಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ರೈಲು ಹಳಿಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಆಗ್ನೇಯ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.

ಜುಲೈ 28ರಿಂದ ಆಗಸ್ಟ್ 3ರವರೆಗೆ ‘ಹುತಾತ್ಮರ ಸಪ್ತಾಹ’ವನ್ನು ಆಚರಿಸಲು ಮಾವೋವಾದಿಗಳು ಕರೆ ನೀಡಿದ್ದರು ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿಗಳ ಕಚೇರಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.