ADVERTISEMENT

ರೈಲು ದುರಂತ: ಒಡಿಶಾಕ್ಕೆ ಭೇಟಿ ನೀಡಿದ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2023, 5:26 IST
Last Updated 4 ಜೂನ್ 2023, 5:26 IST
   

ನವದೆಹಲಿ: ಒಡಿಶಾದ ಬಾಲಸೋರ್‌ನ ತ್ರಿವಳಿ ರೈಲು ದುರಂತದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ನೀಡಲಾಗುತ್ತಿರುವ ವೈದ್ಯಕೀಯ ನೆರವನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಭಾನುವಾರ ಭುವನೇಶ್ವರಕ್ಕೆ ಬಂದಿಳಿದಿದ್ದಾರೆ.

ಭುವನೇಶ್ವರದ ಏಮ್ಸ್ ಮತ್ತು ಕಟಕ್‌ನ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಲಿರುವ ಮಾಂಡವಿಯಾ, ಗಾಯಗೊಂಡ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುತ್ತಿರುವುದನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ರೈಲು ದುರಂತದಲ್ಲಿ 288 ಪ್ರಯಾಣಿಕರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಾಲಸೋರ್‌ ಜಿಲ್ಲಾ ಆಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ದಾಖಲಿಸಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ADVERTISEMENT

ಈ ಎಲ್ಲಾ ಬೆಳವಣಿಗೆಗಳ ನಡುವೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲು ಅಪಘಾತ ಸಂಭವಿಸಿದ ಸ್ಥಳದಲ್ಲಿ ನಡೆಯುತ್ತಿರುವ ರೈಲು ಹಳಿ ಮರು ನಿರ್ಮಾಣ ಕಾರ್ಯವನ್ನು ಪರಿಶೀಲನೆ ನಡೆಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈಲು ಅಪಘಾತದ ಮೂಲ ಕಾರಣವನ್ನು ಗುರುತಿಸಲಾಗಿದೆ. ನಿನ್ನೆ (ಶನಿವಾರ) ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಎಲ್ಲಾ ಮೃತದೇಹಗಳನ್ನು ತೆರವುಗೊಳಿಸಲಾಗಿದೆ. ರೈಲು ಹಳಿ ಮರು ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಬುಧವಾರ ಬೆಳಗಿನ ವೇಳೆಗೆ ಈ ಹಳಿಯಲ್ಲಿ ರೈಲುಗಳು ಓಡಾಟ ನಡೆಸುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.

ಬೆಂಗಳೂರು– ಹೌರಾ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌, ಕೋರೊಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಶುಕ್ರವಾರ ಸಂಜೆ ಅಪಘಾತ ಸಂಭವಿಸಿತ್ತು. ಈ ಆವಘಡದಲ್ಲಿ ತ್ರಿವಳಿ ರೈಲುಗಳ 17 ಬೋಗಿಗಳು ತೀವ್ರವಾಗಿ ಹಾನಿಗೀಡಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವನ್ನೂ ಓದಿ...

ಒಡಿಶಾ ರೈಲು ದುರಂತ: ಬಾಲಸೋರ್‌ನಲ್ಲಿ ಭರದಿಂದ ಸಾಗಿದ ರೈಲು ಹಳಿ ಮರು ನಿರ್ಮಾಣ ಕಾರ್ಯ

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ ಅಮೆರಿಕ ಅಧ್ಯಕ್ಷ ಬೈಡನ್ ಸೇರಿ ಗಣ್ಯರಿಂದ ಸಂತಾಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.