ADVERTISEMENT

ಗಡುವಿಗೆ ಬಗ್ಗದ ರೈತರು: ಗಾಜಿಪುರದಲ್ಲಿ ಪ್ರತಿಭಟನೆ ಮುಂದುವರಿಕೆ

ಏಜೆನ್ಸೀಸ್
Published 28 ಜನವರಿ 2021, 20:21 IST
Last Updated 28 ಜನವರಿ 2021, 20:21 IST
ಮಾಧ್ಯಮಗಳೊಂದಗೆ ಮಾತನಾಡುತ್ತಿರುವ ರೈತ ನಾಯಕ ರಾಕೇಶ್‌ ಟಿಕಾಯತ್
ಮಾಧ್ಯಮಗಳೊಂದಗೆ ಮಾತನಾಡುತ್ತಿರುವ ರೈತ ನಾಯಕ ರಾಕೇಶ್‌ ಟಿಕಾಯತ್   

ಗಾಜಿಪುರ: ದೆಹಲಿಯ ಗಾಜಿಪುರದ ಯುಪಿ ಗೇಟ್‌ ಬಳಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಗುರುವಾರ ಮಧ್ಯರಾತ್ರಿಯೊಳಗೆ ಜಾಗ ಖಾಲಿ ಮಾಡುವಂತೆ ಅಧಿಕಾರಿಗಳು ಗಡುವು ನೀಡಿದ್ದರೂ, ಪ್ರತಿಭಟನಕಾರರು ಇದಕ್ಕೆ ಬಗ್ಗಲಿಲ್ಲ.

ಗಾಜಿಪುರ ಮತ್ತು ಸಿಂಘು ಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಗಾಜಿಪುರದ ಯುಪಿ ಗೇಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಕಿಸಾನ್‌ ಯೂನಿಯನ್‌ನ (ಬಿಕೆಯು) ಮುಖಂಡ ರಾಕೇಶ್‌ ಟಿಕಾಯತ್‌ ಅವರು ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ವಿನಾಃ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದುಕೊಳ್ಳುವವರೆಗೂ ಪ್ರತಿಭಟನೆಯನ್ನು ಅಂತ್ಯಗೊಳಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಶಸ್ತ್ರಸಜ್ಜಿತ ದುಷ್ಕರ್ಮಿಗಳನ್ನು ಕಳುಹಿಸಲಾಗಿದೆ’ ಎಂದೂ ಅವರು ಆರೋಪಿಸಿದ್ದಾರೆ.

ಅಲ್ಲದೆ, ಸುದ್ದಿಗಾರರೊಂದಿಗೆ ಮಾತನಾಡುವಾಗ ಕಣ್ಣೀರು ಹಾಕಿದ ಟಿಕಾಯತ್‌, 'ರೈತರ ಮೇಲೆ ಲಾಠಿ ಬೀಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆ ಈಡೇರುವ ವರೆಗೆ ನಾವು ಇಲ್ಲಿಂದ ಕದಲುವುದಿಲ್ಲ,' ಎಂದು ಹೇಳಿದರು.

ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರ ನಡೆಯನ್ನು ಖಂಡಿಸಿದ ಟಿಕಾಯತ್‌, ‘ಗಾಜಿಪುರ ಗಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿದೆ. ಆದರೂ ಉತ್ತರ ಪ್ರದೇಶ ಸರ್ಕಾರ ಧಮನಕಾರಿ ನೀತಿಯನ್ನು ಅನುಸರಿಸುತ್ತಿದೆ’ ಎಂದಿದ್ದಾರೆ.

‘ಪ್ರತಿಭಟನೆಯ ಸ್ಥಳದಲ್ಲಿ ಒದಗಿಸಲಾಗಿದ್ದ ಮೂಲಸೌಕರ್ಯ ಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಪ್ರತಿಭಟನಕಾರರ ಜತೆ ಮಾತನಾಡಿ ಅವರನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಉತ್ತರ ‍ಪ್ರದೇಶ ಸರ್ಕಾರ ಹೇಳಿದೆ. ಒಂದು ವೇಳೆ ರೈತರು ಆದೇಶವನ್ನು ಪಾಲಿಸದೇ ಇದ್ದರೆ ಬಲ ಪ್ರಯೋಗಿಸಲೂ ಸೂಚಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.