ADVERTISEMENT

ಓಮೈಕ್ರಾನ್ ಸಾಮಾನ್ಯ ವೈರಲ್ ಜ್ವರ, ಮುನ್ನೆಚ್ಚರಿಕೆ ಅಗತ್ಯ: ಯೋಗಿ ಆದಿತ್ಯನಾಥ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 10:36 IST
Last Updated 3 ಜನವರಿ 2022, 10:36 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಲಖನೌ: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ಸೋಂಕನ್ನು 'ಸಾಮಾನ್ಯ ವೈರಲ್ ಜ್ವರ' ಎಂದು ಕರೆದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆದರೂ ಮುನ್ನೆಚ್ಚರಿಕೆ ಅಗತ್ಯ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ 15ರಿಂದ 18 ವರ್ಷದ ವರೆಗಿನ ಮಕ್ಕಳಿಗೆ ಕೋವಿಡ್ ಲಸಿಕೆ ವಿತರಣೆ ಅಭಿಯಾನವನ್ನು ಪರಿಶೀಲಿಸಿದ ಬಳಿಕ ವರದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಆದಿತ್ಯನಾಥ್, 'ಓಮೈಕ್ರಾನ್ ವೇಗವಾಗಿ ಹರಡುತ್ತದೆ ಎಂಬುದು ನಿಜ. ಆದರೆ ಕೋವಿಡ್‌ನ ಎರಡನೇ ಅಲೆಗೆ ಹೋಲಿಸಿದರೆ ಹೊಸ ರೂಪಾಂತರವು ದುರ್ಬಲವಾಗಿದೆ. ಇದು ಸಾಮಾನ್ಯ ವೈರಲ್ ಜ್ವರ ಮಾತ್ರವಾಗಿದೆ. ಆದರೆ ಯಾವುದೇ ರೋಗದ ವಿರುದ್ಧ ಮುನ್ನೆಚ್ಚರಿಕೆ ಹಾಗೂ ಜಾಗರೂಕತೆ ವಹಿಸುವುದು ಮುಖ್ಯ. ಭಯಭೀತರಾಗುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.

ಕಳೆದ ವರ್ಷ ಮಾರ್ಚ್-ಎಪ್ರಿಲ್‌ನಲ್ಲಿ ಡೆಲ್ಟಾ ವೈರಸ್‌ಗೆ ಒಳಗಾದವರು ಚೇತರಿಸಿಕೊಳ್ಳಲು 15ರಿಂದ 20 ದಿನ ಬೇಕಾಯಿತು. ಚೇತರಿಸಿಕೊಂಡ ಬಳಿಕ ಹಲವಾರು ಆರೋಗ್ಯ ಸಮಸ್ಯೆಗಳು ಕಂಡುಬಂದವು. ಆದರೆ ಓಮೈಕ್ರಾನ್ ಪ್ರಕರಣಗಳಲ್ಲಿ ಹಾಗಾಗಿಲ್ಲ. ವೈರಸ್ ದುರ್ಬಲಗೊಂಡಿದೆ. ಆದರೂ ರೋಗಗಳಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಇದುವರೆಗೆ ಎಂಟು ಓಮೈಕ್ರಾನ್ ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಮೂವರು ಗುಣಮುಖರಾಗಿದ್ದು, ಉಳಿದವರು ಪ್ರತ್ಯೇಕವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.