ADVERTISEMENT

ಒಂದು ದೇಶ, ಒಂದು ಚುನಾವಣೆ: ಉನ್ನತಮಟ್ಟದ ಸಮಿತಿ ವಿಸರ್ಜಿಸಲು ಖರ್ಗೆ ಆಗ್ರಹ

ಪಿಟಿಐ
Published 19 ಜನವರಿ 2024, 10:49 IST
Last Updated 19 ಜನವರಿ 2024, 10:49 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ‘ಒಂದು ದೇಶ, ಒಂದು ಚುನಾವಣೆ ಎಂಬ ಕಲ್ಪನೆಯು ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದ್ದು, ಇದನ್ನು ಕೈಬಿಡಬೇಕು. ಇದರ ಸಾಧ್ಯತೆಗಾಗಿ ರಚನೆಗೊಂಡಿರುವ ಉನ್ನತಮಟ್ಟದ ಸಮಿತಿಯನ್ನು ವಿಸರ್ಜಿಸಬೇಕು’ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಒಂದು ದೇಶ, ಒಂದು ಚುನಾವಣೆ ಜಾರಿ ಕುರಿತಂತೆ ಸರ್ಕಾರ ರಚಿಸಿರುವ ಸಮಿತಿಗೆ ತಮ್ಮ ಸಲಹೆಗಳನ್ನು ನೀಡುವಂತೆ ಕಳೆದ ಅ. 18ರಂದು ಸಮಿತಿ ಕಾರ್ಯದರ್ಶಿ ನಿತಿನ್ ಚಂದ್ರ ಅವರು ಬರೆದ ಪತ್ರಕ್ಕೆ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

‘ಕೇಂದ್ರ ಸರ್ಕಾರವು ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನಕ್ಕೆ ಮಾಜಿ ರಾಷ್ಟ್ರಪತಿ ತಮ್ಮ ಕಚೇರಿಯ ದುರ್ಬಳಕೆ ಆಗುವುದನ್ನು ತಡೆಯಬೇಕು’ ಎಂದು ಸಮಿತಿ ಅಧ್ಯಕ್ಷ ರಾಮನಾಥ ಕೋವಿಂದ್ ಅವರನ್ನು ಕೋರಿದ್ದಾರೆ.

ADVERTISEMENT

‘ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಒಂದು ದೇಶ, ಒಂದು ಚುನಾವಣೆಯನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಾರಾಸಗಟಾಗಿ ವಿರೋಧಿಸಿದೆ. ಈ ನಿಟ್ಟಿನಲ್ಲಿ ಈ ಕಲ್ಪನೆಯನ್ನೇ ರದ್ದುಗೊಳಿಸಿ, ಇದರ ಅಧ್ಯಯನಕ್ಕೆ ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿಯನ್ನು ವಿಸರ್ಜಿಸಬೇಕು’ ಎಂದಿದ್ದಾರೆ.

‘ಸರ್ಕಾರ, ಸಂಸತ್‌ ಮತ್ತು ಕೇಂದ್ರ ಚುನಾವಣಾ ಆಯೋಗವು ಜನಾಭಿಪ್ರಾಯಕ್ಕೆ ಮಹತ್ವ ನೀಡಬೇಕೇ ಹೊರತು,  ಏಕಕಾಲಕ್ಕೆ ದೇಶದ ತುಂಬಾ ಚುನಾವಣೆ ನಡೆಸುವ ಅಪ್ರಜಾತಾಂತ್ರಿಕ ಸಲಹೆಗಳನ್ನು ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು’ ಎಂದು ಖರ್ಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.