ADVERTISEMENT

ONGC ಡ್ರಿಲ್ಲಿಂಗ್‌ ತಾಣದಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಅವಘಡ: 500 ಮರಗಳು ಆಹುತಿ

5 ಕಿ.ಮೀ ವ್ಯಾಪ್ತಿಯಲ್ಲಿನ ಜನರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 15:04 IST
Last Updated 5 ಜನವರಿ 2026, 15:04 IST
–
   

ಹೈದರಾಬಾದ್‌: ಆಂಧ್ರಪ್ರದೇಶದ ಡಾ.ಬಿ.ಆರ್‌.ಅಂಬೇಡ್ಕರ್‌ ಕೋನಸೀಮ ಜಿಲ್ಲೆಯಲ್ಲಿರುವ ಒಎನ್‌ಜಿಸಿಗೆ ಸೇರಿದ ಡ್ರಿಲ್ಲಿಂಗ್‌ ತಾಣದಲ್ಲಿ ಸೋಮವಾರ ಭಾರಿ ಪ್ರಮಾಣದಲ್ಲಿ ಅನಿಲ ಸೋರಿಕೆಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಆತಂಕ ಸೃಷ್ಟಿಯಾಗಿತ್ತು.

ಜಿಲ್ಲೆಯ ಮಲ್ಕಿಪುರಂ ತಾಲ್ಲೂಕಿನ ಇರುಸುಮಂಡಲಮ್ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಅನಿಲವು ಗಗನಮುಖಿಯಾಗಿ ಹೊರಹೊಮ್ಮಿದ್ದಲ್ಲದೇ, ಭಾರಿ ಪ್ರಮಾಣದ ಜ್ವಾಲೆ ಹೊತ್ತಿಕೊಳ್ಳಲೂ ಕಾರಣವಾಯಿತು. ಇದರ ಪರಿಣಾಮವಾಗಿ, ಆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ತೆಂಗಿನ ಮರಗಳು ಸುಟ್ಟು ಕರಕಲಾಗಿವೆ.

ಈ ಅವಘಡ ಸಂಭವಿಸಿದ ಬೆನ್ನಲ್ಲೇ, ಮುಂಜಾಗ್ರತಾ ಕ್ರಮವಾಗಿ ಡ್ರಿಲ್ಲಿಂಗ್ ತಾಣದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಜನರನ್ನು ಅಧಿಕಾರಿಗಳು ಸ್ಥಳಾಂತರಗೊಳಿಸಿದರು.

ADVERTISEMENT

ಅಗ್ನಿಶಾಮಕ ದಳ ಹಾಗೂ ತುರ್ತು ಸ್ಪಂದನಾ ತಂಡಗಳು ಸ್ಥಳಕ್ಕೆ ಧಾವಿಸಿ, ಅನಿಲ ಸೋರಿಕೆ ತಡೆಗಟ್ಟುವ ಜೊತೆಗೆ ಬೆಂಕಿ ನಂದಿಸಿದವು. ಬಾಧಿತ ಗ್ರಾಮಗಳ ಜನರಿಗಾಗಿ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.

‘ಘಟನಾ ಸ್ಥಳದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಹಾಗೂ ಬಾಧಿತರಿಗೆ ಆಹಾರ, ನೀರು ಪೂರೈಕೆ ಹಾಗೂ ವೈದ್ಯಕೀಯ ಸೇವೆ ಒದಗಿಸುವಲ್ಲಿ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಘಟನಾ ಸ್ಥಳ: ಒಎನ್‌ಜಿಸಿಯು ಕೃಷ್ಣಾ ಗೋದಾವರಿ(ಕೆಜಿ) ತೀರ ಪ್ರದೇಶದಲ್ಲಿ ನೈಸರ್ಗಿಕ ಅನಿಲ ಸಂಸ್ಕರಣಾ ಕಾರ್ಯಾಚರಣೆ ನಡೆಸುತ್ತಿದೆ. ಇದರ ಭಾಗವಾಗಿ ಇರುಸುಮಂಡಲಮ್ ಗ್ರಾಮದ ಬಳಿ ಇರುವ ತಾಣದಲ್ಲಿ ಕಂಪನಿ ಪರವಾಗಿ ಡೀಪ್ ಇಂಡಸ್ಟ್ರೀಸ್ ಲಿಮಿಟೆಡ್‌, ಮೋರಿ ಫೀಲ್ಡ್‌ನಲ್ಲಿ ಡ್ರಿಲ್ಲಿಂಗ್‌ ಕಾರ್ಯಾಚರಣೆ ನಡೆಸುತ್ತಿದೆ.

ಕಾರ್ಯಾಚರಣೆ ವೇಳೆ, ಒತ್ತಡದಲ್ಲಿ ದಿಢೀರ್‌ ಹೆಚ್ಚಳ ಉಂಟಾಗಿದ್ದೇ ಅವಘಡಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ತಾಣದಿಂದ 500–600 ಮೀಟರ್‌ ವ್ಯಾಪ್ತಿಯಲ್ಲಿ ಜನವಸತಿ ಇಲ್ಲ. ಹೀಗಾಗಿ ಯಾವುದೇ ಸಾವು–ನೋವು ಸಂಭವಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.