ADVERTISEMENT

ಸರ್ಕಾರಗಳಿಂದಲೇ ಈರುಳ್ಳಿ ಮಾರಾಟ

ಪಿಟಿಐ
Published 5 ಡಿಸೆಂಬರ್ 2019, 20:00 IST
Last Updated 5 ಡಿಸೆಂಬರ್ 2019, 20:00 IST
   

ದೇಶದ ಬಹುತೇಕ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ₹ 100 –₹ 150 ಮುಟ್ಟಿದೆ. ಈರುಳ್ಳಿ ಕೊರತೆ ಉಂಟಾಗಿರುವ ಕಾರಣ ಹಲವು ರಾಜ್ಯಗಳು ವಿದೇಶಗಳಿಂದ ಈರುಳ್ಳಿಯನ್ನು ಆಮದು ಮಾಡಿಕೊಂಡು, ಪಡಿತರ ವಿತರಣಾ ಜಾಲದ ಮೂಲಕ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ. ದೇಶಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಈರುಳ್ಳಿಯನ್ನು ಖರೀದಿಸಿ, ಅದನ್ನೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ

ಬಿಹಾರದಲ್ಲಿ ₹ 35

ಬಿಹಾರ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ₹ 130ರಂತೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಿಂದ ಈರುಳ್ಳಿ ಖರೀದಿಸಿ ಸರ್ಕಾರವು, ಬಿಹಾರ ರಾಜ್ಯ ಸಹಕಾರ ಸಂಘದ ಮಳಿಗೆಗಳು ಮತ್ತು ಸಂಚಾರಿ ಮಳಿಗೆಗಳ ಮೂಲಕ ಮಾರಾಟ ಮಾಡುತ್ತಿದೆ. ಕೆ.ಜಿ. ಈರುಳ್ಳಿಯನ್ನು ₹ 35ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಮಳಿಗೆಗಳ ಬಳಿ ಜನರು ಸರದಿಯಲ್ಲಿ ನಿಂತು ಖರೀದಿಸುತ್ತಿದ್ದಾರೆ. ಪ್ರತಿ ವ್ಯಕ್ತಿ ಗರಿಷ್ಠ 2 ಕೆ.ಜಿ. ಈರುಳ್ಳಿ ಖರೀದಿಸಬಹುದಾಗಿದೆ.

ADVERTISEMENT

ಪ.ಬಂಗಾಳದಲ್ಲಿ ₹ 59

ಪಶ್ಚಿಮ ಬಂಗಾಳದಲ್ಲಿ ಈರುಳ್ಳಿಯ ಬೆಲೆ ಕೆ.ಜಿ.ಗೆ ₹ 150 ತಲುಪಿದೆ. ಸರ್ಕಾರವು ಈಗಾಗಲೇ ದೇಶಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹ 88ರಂತೆ ಖರೀದಿಸಿದ ಈರುಳ್ಳಿಯನ್ನು ₹ 59ಕ್ಕೆ ಮಾರಾಟ ಮಾಡುತ್ತಿದೆ. ನ್ಯಾಯಬೆಲೆ ಅಂಗಡಿ ‘ಸುಫಲ’ ಮತ್ತು ಮೊಬೈಲ್‌ ಮಳಿಗೆಗಳ ಮೂಲಕ ಈ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ. ಇದರ ಜತೆಯಲ್ಲೇ ಈಜಿಪ್ಟ್‌ನಿಂದ ಈರುಳ್ಳಿ ಆಮದು ಮಾಡಿಕೊಳ್ಳುತ್ತಿದೆ.

ಶಾ ಸಭೆ

ಈರುಳ್ಳಿ ಬೆಲೆ ಏರಿಕೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತರ ಸಚಿವರ ಜತೆ ಗುರುವಾರ ಸಭೆ ನಡೆಸಿದ್ದಾರೆ.

ಪ್ರತಿಭಟನೆ: ಈರುಳ್ಳಿ ಬೆಲೆ ಏರಿಕೆಯನ್ನು ವಿರೋಧಿಸಿ ಸಂಸತ್ ಭವನದ ಆವರಣದಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಅಫ್ಗಾನಿಸ್ತಾನದಿಂದ ಆಮದು

ಉತ್ತರ ಭಾರತದ ಈರುಳ್ಳಿ ಸಗಟು ವ್ಯಾಪಾರಿಗಳಲ್ಲಿ ಹಲವರು ಅಫ್ಗಾನಿಸ್ತಾನದಿಂದ ಈರುಳ್ಳಿ ಆಮದು ಮಾಡಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದ ಮೂಲಕ ಈ ಈರುಳ್ಳಿ ಭಾರತಕ್ಕೆ ಬರುತ್ತಿದೆ.

ಅಫ್ಗಾನಿಸ್ತಾನದಿಂದ ಖರೀದಿಸಿದ ಈರುಳ್ಳಿ ಹೊತ್ತಿರುವ 10ರಿಂದ 15 ಟ್ರಕ್‌ಗಳು ಪ್ರತಿದಿನ ಅಟ್ಟಾರಿ–ವಾಘಾ ಗಡಿಗೆ ಬರುತ್ತಿವೆ. ಒಂದು ಟ್ರಕ್‌ನಲ್ಲಿ 35 ಟನ್‌ ಈರುಳ್ಳಿ ತರಲಾಗುತ್ತಿದೆ. ಗಡಿಯಲ್ಲಿ ಆ ಈರುಳ್ಳಿ ಮೂಟೆಗಳನ್ನು ಭಾರತದ ಟ್ರಕ್‌ಗಳಿಗೆ ತುಂಬಿಸಿಕೊಳ್ಳಲಾಗುತ್ತಿದೆ. ನಂತರ ಪಂಜಾಬ್, ರಾಜಸ್ಥಾನ, ಹರಿಯಾಣ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು–ಕಾಶ್ಮೀರ ಮತ್ತು ದೆಹಲಿಗೆ ಪೂರೈಸಲಾಗುತ್ತಿದೆ.

ಈ ಎಲ್ಲಾ ರಾಜ್ಯಗಳ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ. ದೇಶಿ ಈರುಳ್ಳಿಯ ಬೆಲೆ ₹ 80– ₹ 120ರವರೆಗೆ ಇದೆ. ಅಫ್ಗಾನಿಸ್ತಾನದಿಂದ ಆಮದು ಮಾಡಿಕೊಳ್ಳಲಾದ ಈರುಳ್ಳಿ, ಪ್ರತಿ ಕೆ.ಜಿ.ಗೆ ₹ 70– ₹ 80ಕ್ಕೆ ಮಾರಾಟವಾಗುತ್ತಿದೆ.

ಭಾರತ–ಪಾಕಿಸ್ತಾನದ ಮಧ್ಯೆ ಈಗ ವ್ಯಾಪಾರ ಸ್ಥಗಿತವಾಗಿದೆ. 2010ರ ಪಾಕಿಸ್ತಾನ–ಅಫ್ಗಾನಿಸ್ತಾನ ವ್ಯಾಪಾರ ಮಾರ್ಗ ಒಪ್ಪಂದದ ಪ್ರಕಾರ, ಅಫ್ಗಾನಿಸ್ತಾನವು ಭಾರತಕ್ಕೆ ವಾಣಿಜ್ಯ ಸರಕುಗಳನ್ನು ರಫ್ತು ಮಾಡಬಹುದು. ಅವನ್ನು ತಲುಪಿಸಲು ಪಾಕಿಸ್ತಾನದ ಹೆದ್ದಾರಿಗಳನ್ನು ಬಳಸಿಕೊಳ್ಳಬಹುದು.

-800:ಟನ್‌ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ

-200:ಟನ್ ಪ್ರತಿ ವಾರ ಕೋಲ್ಕತ್ತ ತಲುಪಲಿರುವ ಈರುಳ್ಳಿ

-₹ 65:ಪ್ರತಿ ಕೆ.ಜಿ. ಆಮದು ಈರುಳ್ಳಿಯ ಬೆಲೆ. ಇದನ್ನು ಇನ್ನೂ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ

-256: ಮಳಿಗೆ

-ಒಡಿಶಾದಲ್ಲಿ ಕೆ.ಜಿ.ಈರುಳ್ಳಿಯ ಬೆಲೆ ₹ 120 ಮುಟ್ಟಿದೆ. ಕಡಿಮೆ ಬೆಲೆಯಲ್ಲಿ ಈರುಳ್ಳಿ ಮಾರಾಟ ಮಾಡಲು ರಾಜ್ಯ ಸರ್ಕಾರವು ಈಗಾಗಲೇ 256 ಮಳಿಗೆಗಳನ್ನು ತೆರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.