
ನವದೆಹಲಿ: ‘ಆನ್‌ಲೈನ್ ಮನಿ ಗೇಮ್ಸ್’ಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ನಿಷೇಧಿಸುವ ಆನ್‌ಲೈನ್ ಗೇಮಿಂಗ್ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಸಮಗ್ರ ಉತ್ತರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು, ‘ಕೇಂದ್ರ ಸರ್ಕಾರ ಈಗಾಗಲೇ ಉತ್ತರ ನೀಡಿದೆ. ಆದರೆ, ಈ ಸಂಬಂಧ ಸಮಗ್ರ ಪ್ರತಿಕ್ರಿಯೆಯನ್ನು ಬಯಸುತ್ತೇವೆ’ ಎಂದು ಹೇಳಿತು.
ಅರ್ಜಿದಾರರ ಪರ ಹಾಜರಾಗುವ ವಕೀಲರಿಗೆ ಉತ್ತರದ ಪ್ರತಿಯನ್ನು ಮುಂಚಿತವಾಗಿ ಒದಗಿಸುವಂತೆ ತಿಳಿಸಿದ ಪೀಠವು, ಅದಕ್ಕೇನಾದರೂ ಪ್ರತ್ಯುತ್ತರ ಸಲ್ಲಿಸುವುದಿದ್ದರೆ ಆದಷ್ಟು ಬೇಗ ಸಲ್ಲಿಸಿ ಎಂದು ಅರ್ಜಿದಾರರಿಗೆ ತಿಳಿಸಿತು. ಈ ಕುರಿತ ವಿಚಾರಣೆಯನ್ನು ಪೀಠ ಇದೇ 26ಕ್ಕೆ ನಿಗದಿಪಡಿಸಿತು.
‘ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ–2025’ ಹಣ ಹೂಡಿ ಆಡುವ ‘ಆನ್‌ಲೈನ್ ಗೇಮಿಂಗ್’ ಅನ್ನು ನಿಷೇಧಿಸುವ ಕೇಂದ್ರದ ಮೊದಲ ಶಾಸನವಾಗಿದೆ. ಇದು ಫ್ಯಾಂಟಸಿ ಕ್ರೀಡೆಗಳು ಮತ್ತು ಬಾಜಿ ಕಟ್ಟುವ ಇ–ಕ್ರೀಡೆಗಳನ್ನು ನಿಷೇಧಿಸುತ್ತದೆ. ಕೇಂದ್ರದ ಈ ಕಾಯ್ದೆಯನ್ನು ಪ್ರಶ್ನಿಸಿ ದೆಹಲಿ, ಕರ್ನಾಟಕ ಮತ್ತು ಮಧ್ಯ ಪ್ರದೇಶಗಳ ಹೈಕೋರ್ಟ್‌ಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ.
ಈ ಮೂರೂ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಈ ಕುರಿತ ಅರ್ಜಿಗಳನ್ನು ಕೇಂದ್ರ ಸರ್ಕಾರದ ಮನವಿ ಮೇರೆಗೆ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.