ಜುಲೈ1 ರಿಂದ ತತ್ಕಾಲ್‌ನಲ್ಲಿ ರೈಲು ಟಿಕೆಟ್ ಬುಕಿಂಗ್‌ಗೆ ಆಧಾರ್ ದೃಢೀಕರಣ ಕಡ್ಡಾಯ
ನವದೆಹಲಿ: ಇನ್ನು ಮುಂದೆ ಆಧಾರ್ ದೃಢೀಕೃತ ಬಳಕೆದಾರರು ಮಾತ್ರ ತತ್ಕಾಲ್ ಯೋಜನೆಯಡಿ ರೈಲು ಟಿಕೆಟ್ ಬುಕ್ ಮಾಡಬಹುದು. ಈ ನಿಯಮ ಜುಲೈ1 ರಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 10 ರಂದು ಹೊರಡಿಸಿದ ಪ್ರಕಟಣೆಯಲ್ಲಿ ತತ್ಕಾಲ್ ಯೋಜನೆಯ ಪ್ರಯೋಜನಗಳನ್ನು ಸಾಮಾನ್ಯ ಬಳಕೆದಾರರೂ ಪಡೆಯಲು ಈ ಕ್ರಮ ಜರುಗಿಸಲಾಗಿದೆ. ಜುಲೈ 1 ರಿಂದ ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡುವವರು ಆಧಾರ್ ದೃಢೀಕರಣ ಮಾಡಿಕೊಳ್ಳಬೇಕು ಎಂದು ಸಚಿವಾಲಯ ಹೇಳಿದೆ.
ತತ್ಕಾಲ್ ಬುಕಿಂಗ್ ತೆರೆದ ಮೊದಲ 30 ನಿಮಿಷಗಳವರೆಗೆ ಅಧಿಕೃತ ಏಜೆಂಟರಿಗೆ ಟಿಕೆಟ್ ಬುಕ್ ಮಾಡಲು ಅವಕಾಶವಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ಹವಾನಿಯಂತ್ರಿತ ಬೋಗಿಗಳಿಗೆ ಬೆಳಿಗ್ಗೆ 10 ರಿಂದ 10.30ರವರೆಗೆ ಹಾಗೂ ಹವಾನಿಯಂತ್ರಿತವಲ್ಲದ ಬೋಗಿಗಳಿಗೆ ಬೆಳಿಗ್ಗೆ 11 ರಿಂದ 11.30ರವರೆಗೆ ತತ್ಕಾಲ್ ಟಿಕೆಟ್ ಬುಕ್ ಮಾಡಲು ನಿರ್ಬಂಧವಿರುತ್ತದೆ. ಈ ಅವಧಿಯಲ್ಲಿ ಆಧಾರ್ ದೃಢೀಕರಿಸಿದ ಬಳಕೆದಾರರಿಗೆ ಆದ್ಯತೆ ನೀಡಲಾಗಿದೆ.
ಅಂದರೆ, ಆಧಾರ್ ದೃಢೀಕರಿಸಿದ ಬಳಕೆದಾರರು ಹವಾನಿಯಂತ್ರಿತ ಬೋಗಿಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಹಾಗೂ ಹವಾನಿಯಂತ್ರಿತವಲ್ಲದ ಬೋಗಿಗಳಿಗೆ ಬೆಳಿಗ್ಗೆ 11 ರಿಂದಲೇ ಟಿಕೆಟ್ ಬುಕ್ ಮಾಡಬಹುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಇದೇ ರೀತಿ ಜುಲೈ 15 ರಿಂದ ತತ್ಕಾಲ್‌ನಲ್ಲಿ ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್ ಆಧಾರಿತ ಒಟಿಪಿ ದೃಢೀಕರಣವನ್ನು ಕಡ್ಡಾಯಗೊಳಿಸಲಾಗುವುದು. ಒಟಿಪಿ ದೃಢೀಕರಣದ ನಂತರವೇ ಪಿಆರ್‌ಎಸ್ ಕೌಂಟರ್‌ಗಳ ಮೂಲಕ ಬುಕಿಂಗ್ ಮಾಡಲು ತತ್ಕಾಲ್ ಟಿಕೆಟ್‌ಗಳು ಲಭ್ಯವಿರುತ್ತವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.