ADVERTISEMENT

 ಪುದುಚೇರಿಯಲ್ಲಿ ಬಿಜೆಪಿಯಿಂದ ಆಪರೇಷನ್‌ ಕಮಲ: ಸಿಎಂ ನಾರಾಯಣಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 2:53 IST
Last Updated 17 ಫೆಬ್ರುವರಿ 2021, 2:53 IST
ಸಿಎಂ ನಾರಾಯಣಸ್ವಾಮಿ
ಸಿಎಂ ನಾರಾಯಣಸ್ವಾಮಿ   

ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್–ಡಿಎಂಕೆ ಮೈತ್ರಿಕೂಟ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಕಾರಣ, ಬಿಜೆಪಿ ಆಪರೇಷನ್‌ ಕಮಲ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ನಾರಾಯಣ ಸ್ವಾಮಿ ಅವರ ಆಪ್ತರಲ್ಲೊಬ್ಬರಾದ ಎ. ಜಾನ್‌ಕುಮಾರ್ ಅವರ ರಾಜೀನಾಮೆಯೊಂದಿಗೆ, ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಸದಸ್ಯರ ಸಂಖ್ಯೆ 10ಕ್ಕೆ ಇಳಿದಿದೆ. ಈ ನಡುವೆ ಸರ್ಕಾರ ಸುಭದ್ರವಾಗಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಇಲ್ಲಿಯವರೆಗೂ ಕಾಂಗ್ರೆಸ್‌ನ ನಾಲ್ವರು ಶಾಸಕರು ರಾಜಿನಾಮೆ ನೀಡಿದ್ದಾರೆ. ಇವರಲ್ಲಿ ಇಬ್ಬರು ಶಾಸಕರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಸೋಮವಾರವಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪಕ್ಷದ ಹಿರಿಯ ಶಾಸಕ ಮಲ್ಲಾಡಿ ಕೃಷ್ಣರಾವ್‌ ಹಾಗೂ ಜಾನ್‌ಕುಮಾರ್‌ ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಇಂದಿನಿಂದ (ಫೆ.17) ಪುದುಚೇರಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಲ್ಲಿದ್ದಾರೆ. ಈ ನಡುವೆ ಶಾಸಕರ ರಾಜೀನಾಮೆ ವರಿಷ್ಠರ ನಿದ್ದೆಗೆಡಿಸಿದೆ.

ಕಾಂಗ್ರೆಸ್‌ ಹಾಗೂ ಡಿಎಂಕೆ ಶಾಸಕರಿಗೆ ಹಣದ ಆಮೀಷ ನೀಡಿ ಬಿಜೆಪಿ ಆಪರೇಷನ್‌ ಕಮಲದ ಬಲೆಗೆ ಕೆಡವಲು ಯತ್ನಿಸುತ್ತಿದೆ. ಆದರೆ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯ ಆಟ ನಡೆಯುವುದಿಲ್ಲ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಕಳೆದ ಜನವರಿಯಲ್ಲಿ ಪುದುಚೇರಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದ್ದು 30 ಸ್ಥಾನಗಳ ಪೈಕಿ 23 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.

ಈಗಾಗಲೇ ನಾಲ್ವರು ಕಾಂಗ್ರೆಸ್‌ ಶಾಸಕರನ್ನು ಸೆಳೆದಿರುವ ಬಿಜೆಪಿ, ಡಿಎಂಕೆ ಪಕ್ಷದ ಮುಖಂಡರಿಗೂ ಗಾಳ ಹಾಕಿದೆ ಎನ್ನಲಾಗಿದೆ. ಪ್ರಮುಖ ವಿರೋಧಪಕ್ಷವಾಗಿರುವ ಎಐಎಡಿಎಂಕೆ ಜೊತೆ ಬಿಜೆಪಿ ಈ ಸಲ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ.

ಪ್ರಸ್ತುತ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳು ತಲಾ 14 ಸದಸ್ಯರನ್ನು ಹೊಂದಿವೆ. 2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 3, ಎಐಎಡಿಎಂಕೆ 7 ಸ್ಥಾನಗಳನ್ನು ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.