ಪ್ರಣಿತಿ ಶಿಂದೆ
ನವದೆಹಲಿ: ಚುನಾವಣೆಗಳಲ್ಲಿ ಜನರ ಮತಗಳನ್ನು ಸೆಳೆಯುವ ಕಾರ್ಯತಂತ್ರದ ಭಾಗವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಕಾಂಗ್ರೆಸ್ ಸಂಸದೆ ಪ್ರಣಿತಿ ಶಿಂದೆ ಗಂಭೀರವಾಗಿ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ್ದ ಅವರು, ಚುನಾವಣೆಗೆ ಮುನ್ನ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಯಿಂದ ದೇಶಭಕ್ತಿಯನ್ನು ಸಾರುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಕಾರ್ಯಾಚರಣೆ ಮೂಲಕ ಏನನ್ನು ಸಾಧಿಸಲಾಗಿದೆ. ಇದು ಕೇವಲ ಮಾಧ್ಯಮಗಳ ಪ್ರಚಾರಕ್ಕಾಗಿ ಎಂದು ಪ್ರಣಿತಿ ವಾಗ್ದಾಳಿ ನಡೆಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎಷ್ಟು ಭಯೋತ್ಪಾದಕರನ್ನು ಸೆರೆ ಹಿಡಿಯಲಾಯಿತು, ನಮ್ಮ ಎಷ್ಟು ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ. ಇದು ಯಾರ ತಪ್ಪು. ಸರ್ಕಾರ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲು ಸಿದ್ಧವಾಗಿಲ್ಲ. ಬದಲಾಗಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತದೆ ಎಂದು ಟೀಕಿಸಿದ್ದಾರೆ.
ಇಂದಿನ ಪರಿಸ್ಥಿತಿಯು ರೋಮ್ ಕೊಲೊಸಿಯಮ್‌ನನ್ನು ನೆನಪಿಸುತ್ತದೆ. ಇದು ವಾಸ್ತುಶಿಲ್ಪದ ವಿಶಿಷ್ಟ ಉದಾಹರಣೆಯಾಗಿದೆ. ಆದರೆ ಇದು ಅಂದಿನ ರಾಜಕೀಯದ ಕೆಟ್ಟ ಪರಿಸ್ಥಿತಿಗೂ ಸಾಕ್ಷಿಯಾಗಿತ್ತು ಎಂದು ಪ್ರಣಿತಿ ಹೇಳಿದ್ದಾರೆ.
ಚುನಾವಣೆಗಳಿಗೆ ಮೊದಲು ಭಯೋತ್ಪಾದಕ ದಾಳಿ ನಡೆಯುತ್ತದೆ. ಬಳಿಕ ಸರ್ಕಾರ ಪ್ರತೀಕಾರದ ದಾಳಿ ನಡೆಸುತ್ತದೆ. ಭಯೋತ್ಪಾದಕರು ಎಲ್ಲಿಂದ ಬಂದರು ಮತ್ತು ಎಲ್ಲಿಗೆ ಹೋದರು ಎಂದು ಸರ್ಕಾರಕ್ಕೆ ತಿಳಿದಿಲ್ಲವೇ?. ಆದರೆ ನೆರೆಯ ದೇಶದ ಮೇಲೆ ದಾಳಿ ನಡೆಸಿ ಆ ಮೂಲಕ ಮತಗಳನ್ನು ಸೆಳೆಯುವ ತಂತ್ರವಾಗಿದೆ ಎಂದು ಪ್ರಣಿತಿ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.