ADVERTISEMENT

ಸರ್ಕಾರ–ವಿಪಕ್ಷ ಸಿಂಧೂರ ಸಂಘರ್ಷ: ಲೋಪದ ಹೊಣೆ ಹೊತ್ತುಕೊಳ್ಳಲು ಅಮಿತ್‌ ಶಾಗೆ ಆಗ್ರಹ

ತಡ ರಾತ್ರಿವರೆಗೆ ನಡೆದ ವಿಶೇಷ ಚರ್ಚೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 0:30 IST
Last Updated 29 ಜುಲೈ 2025, 0:30 IST
   

ನವದೆಹಲಿ: ಆಪರೇಷನ್‌ ಸಿಂಧೂರ ಕುರಿತು ಲೋಕಸಭೆಯಲ್ಲಿ ಸೋಮವಾರ ಆರಂಭವಾದ ವಿಶೇಷ ಚರ್ಚೆಯು ಸೋಮವಾರ ತಡರಾತ್ರಿಯವರೆಗೆ ನಡೆದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವಿನ ಮಾತಿನ ‘ಸಮರ’ದ ಆಖಾಡವಾಗಿ ಪರಿಣಮಿಸಿತು.

ಸಶಸ್ತ್ರ ಪಡೆಗಳು ಉದ್ದೇಶಿತ ರಾಜಕೀಯ–ಮಿಲಿಟರಿ ಉದ್ದೇಶಗಳನ್ನು ಸಾಧಿಸಿದ ಕಾರಣ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆಯೇ ಹೊರತು ಅದಕ್ಕೆ ಪೂರ್ಣ ವಿರಾಮ ಹಾಕಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸ್ಪಷ್ಟಪಡಿಸಿದರೆ, ಪಹಲ್ಗಾಮ್‌ ಭಯೋತ್ಪಾದಕರ ದಾಳಿಯ ಸಂದರ್ಭದಲ್ಲಾಗಿರುವ ಲೋಪದ ಹೊಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಬೇಕು ಎಂದು ಕಾಂಗ್ರೆಸ್‌ ಸಂಸದರು ಒತ್ತಾಯಿಸಿದರು. 

ಮೊದಲು ಮಾತನಾಡಿದ ರಾಜನಾ‌ಥ, ‘ಕದನ ವಿರಾಮ ಘೋಷಣೆಗೆ ಯಾವುದೇ ಒತ್ತಡ ಇರಲಿಲ್ಲ. ಪಾಕಿಸ್ತಾನ ದುಸ್ಸಾಹಸ ತೋರಿದರೆ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ’ ಎಂದು ಎಚ್ಚರಿಸಿದರು.  ಭಯೋತ್ಪಾದಕರು ಮುಂಬೈ ಮೇಲೆ ದಾಳಿಯ ಬಳಿಕ ಯುಪಿಎ ಸರ್ಕಾರದ ನಿಷ್ಕ್ರೀಯತೆಯಿಂದಾಗಿ ಭದ್ರತಾ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಿತು ಎಂದು ಅವರು ದೂರಿದರು. 

ADVERTISEMENT

ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಉಪನಾಯಕ ಗೌರವ್‌ ಗೊಗೊಯ್‌, ‘ಭಾರತ–ಪಾಕ್‌ ನಡುವಿನ ಕದನ ವಿರಾಮ ಘೋಷಣೆಗೆ ನಾನೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 26 ಸಲ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶರಣಾಗಿದ್ದು ಯಾರಿಗೆ’ ಎಂದು ಪ್ರಶ್ನಿಸಿದರು. ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಐದು ರಫೇಲ್‌ ಯುದ್ಧ ವಿಮಾನಗಳನ್ನು ನಾಶಪಡಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಬಿಹಾರದಲ್ಲಿನ ಮತದಾರರ ಪಟ್ಟಿಯ ಪರಿಷ್ಕರಣೆ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ಆಗ್ರಹಿಸಿದವು. ಹೀಗಾಗಿ, ಮಧ್ಯಾಹ್ನ 2 ಗಂಟೆ ವರೆಗೆ ಸುಗಮವಾಗಿ ಕಲಾಪ ನಡೆಯಲಿಲ್ಲ. ಮಧ್ಯಾಹ್ನ 2 ಗಂಟೆಗೆ ಆರಂಭವಾದ ವಿಶೇಷ ಚರ್ಚೆ ತಡರಾತ್ರಿಯವರೆಗೆ ಮುಂದುವರಿಯಿತು. ಮಂಗಳವಾರವೂ ವಿಶೇಷ ಚರ್ಚೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.