ವಾಯುದಾಳಿ
– ಎ.ಐ ಚಿತ್ರ
ನವದೆಹಲಿ: ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆಗಳು ಮೇ 7ರಂದು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ ಐವರು ಭಯೋತ್ಪಾದಕರ ಗುರುತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇವರೆಲ್ಲರೂ ನಿಷೇಧಿತ ಲಷ್ಕರ್–ಎ–ತಯಬಾ ಹಾಗೂ ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರು.
ಈ ಪೈಕಿ ಒಬ್ಬಾತ ಲಷ್ಕರ್–ಎ–ತಯಬಾದ ಮುದಸ್ಸರ್ ಖದಿಯನ್ ಖಾಸ್ ಅಲಿಯಾಸ್ ಮುದಸ್ಸರ್ ಅಲಿಯಾಸ್ ಅಬೂ ಜುಂದಲ್ ಎಂದು ಅವರು ತಿಳಿಸಿದ್ದಾರೆ. ಈತ ಮುರಿದ್ಕೆಯ ಮರ್ಕಜ್ ತಯಬಾದ ಉಸ್ತುವಾರಿಯಾಗಿದ್ದ.
ಆತನ ಅಂತ್ಯ ಸಂಸ್ಕಾರದ ವೇಳೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಮರ್ಯಂ ನವಾಝ್ ಅವರ ಪರವಾಗಿ ಹೂಮಾಲೆ ಅರ್ಪಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಆತನ ಅಂತಿಮ ಪ್ರಾರ್ಥನೆ ನಡೆದಿದ್ದು, ಜಾಗತಿಕ ಉಗ್ರ ಜಮಾತ್–ಉದ್–ದವಾ ಸಂಘಟನೆಯ ಹಾಫಿಜ್ ಅಬ್ದುಲ್ ರೌಫ್ ಪ್ರಾರ್ಥನೆಗೆ ನೇತೃತ್ವ ನೀಡಿದ್ದಾನೆ.
ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಹಾಗೂ ಪಂಜಾಬ್ ಪೊಲೀಸ್‌ನ ಮಹಾ ನಿರ್ದೇಶಕ ಕೂಡ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.
ಜಮಾತ್–ಉದ್–ದವಾ ಸಂಘಟನೆಯ ಹಾಫಿಜ್ ಮೊಹಮ್ಮದ್ ಜಮೀಲ್ ಕೂಡ ಭಾರತದ ದಾಳಿಯಲ್ಲಿ ಸಾವಿಗೀಡಾಗಿದ್ದಾನೆ. ಆತ ಭಾರತ ದಾಳಿ ನಡೆಸಿದ ಬಹವಾಲ್ಪುರದ ಮರ್ಕಜ್ ಸುಭಾನ್ ಅಲ್ಲಾದ ಉಸ್ತುವಾರಿಯಾಗಿದ್ದ. ಆತ ಜೈಷ್–ಎ–ಮೊಹಮ್ಮದ್‌ಗೆ ಯುವಕರನ್ನು ನೇಮಕ ಹಾಗೂ ಅದಕ್ಕೆ ನಿಧಿ ಸಂಗ್ರಹ ಮಾಡುತ್ತಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ.
ಜೈಷ್–ಎ–ಮೊಹಮ್ಮದ್ ಸಂಘಟನೆಯ ಮೊಹಮ್ಮದ್ ಯೂಸೂಫ್ ಅಜರ್ ಅಲಿಯಾಸ್ ಉಸ್ತಾದ್ ಜಿ ಅಲಿಯಾಸ್ ಮೊಹಮ್ಮದ್ ಸಲೀಂ ಅಲಿಯಾಸ್ ಘೋಸಿ ಸಾಹಬ್ ಕೂಡ ಭಾರತದ ದಾಳಿಯಲ್ಲಿ ಹತ್ಯೆಯಾಗಿದ್ದಾನೆ.
ಈತ ಮಸೂದ್ ಅಜರ್‌ನ ಮೈದುನ. ಕಂದಹಾರ್ ವಿಮಾನ ಅಪಹರಣ ಹಾಗೂ ಜಮ್ಮು ಕಾಶ್ಮೀರದಲ್ಲಿ ನಡೆದ ಹಲವು ದಾಳಿಯ ಹಿಂದಿನ ರೂವಾರಿ ಆಗಿದ್ದ.
ಲಷ್ಕರ್–ಎ–ತಯಬಾದ ಖಾಲಿದ್ ಅಲಿಯಾಸ್ ಅಬೂ ಅಕಶಾ ಹಾಗೂ ಜೈಷ್–ಎ–ಮೊಹಮ್ಮದ್‌ನ ಮೊಹಮ್ಮದ್ ಹಸನ್ ಖಾನ್ ಕೂಡ ಭಾರತದ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ.
ಖಾಲಿದ್ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಮತ್ತು ಅಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದ.
ಫೈಸಲಾಬಾದ್‌ನಲ್ಲಿ ನಡೆದ ಅವನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಹಿರಿಯ ಸೇನಾ ಅಧಿಕಾರಿಗಳು ಮತ್ತು ಫೈಸಲಾಬಾದ್‌ನ ಉಪ ಆಯುಕ್ತರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.