ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: 'ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮದ 122ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳು ನಡೆಸಿರುವ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಸ್ತಾಪಿಸಿದ್ದಾರೆ.
'ಆಪರೇಷನ್ ಸಿಂಧೂರ' ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಬದಲಾದ ಭಾರತದ ಪ್ರತಿಬಿಂಬ' ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
'ಇಂದು ಇಡೀ ದೇಶವೇ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಜಾಗತಿಕ ವೇದಿಕೆಯಲ್ಲಿ ಭಾರತದ ದೃಢಸಂಕಲ್ಪ, ಧೈರ್ಯ ಮತ್ತು ಬೆಳೆಯುತ್ತಿರುವ ಶಕ್ತಿಯು ಪ್ರತಿಫಲಿಸುತ್ತದೆ' ಎಂದು ಹೇಳಿದ್ದಾರೆ.
'ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಆಪರೇಷನ್ ಸಿಂಧೂರ ಒಂದು ಮಹತ್ವದ ತಿರುವು ಆಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೊಸ ಚೈತನ್ಯವನ್ನು ತುಂಬಿದೆ. ಭಾರತದ ಶಕ್ತಿ ಹಾಗೂ ಉದ್ದೇಶದ ಸ್ಪಷ್ಟತೆಯ ಸಂಕೇತವಾಗಿದೆ' ಎಂದು ಹೇಳಿದ್ದಾರೆ.
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ನೆಲೆಗಳನ್ನು ನಾಶಗೊಳಿಸಿರುವ ಭಾರತೀಯ ಸಶಸ್ತ್ರ ಪಡೆಗಳನ್ನು ಪ್ರಧಾನಿ ಮೋದಿ ಹೊಗಳಿದ್ದಾರೆ.
ದೇಶದೆಲ್ಲೆಡೆಯಿಂದ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿ ಸಂದೇಶದ ಮಹಾಪೂರವೇ ಹರಿದು ಬಂದಿತು. ದೇಶಪ್ರೇಮವು ಉಕ್ಕಿ ಹರಿಯಿತು. ಮಕ್ಕಳು ತಿವ್ರರ್ಣ ಧ್ವಜದ ಚಿತ್ರವನ್ನು ಬಿಡಿಸಿ ಸಂತೋಷ ಆಚರಿಸಿರುವುದನ್ನು ಪ್ರಧಾನಿ ಮೋದಿ ಮೆಲುಕು ಹಾಕಿದರು.
'ಆತ್ಮನಿರ್ಭರ ಭಾರತ'ದಲ್ಲಿ ಈ ಕಾರ್ಯಾಚರಣೆಯ ಯಶಸ್ಸಿಗೆ ಭಾರತದ ಸ್ವದೇಶಿ ನಿರ್ಮಿತ ರಕ್ಷಣಾ ಸಾಮರ್ಥ್ಯಗಳು ಕಾರಣವಾಗಿವೆ. ದೇಶೀಯವಾಗಿ ನಿರ್ಮಿಸಿದ ಶಸ್ತ್ರಾಸ್ತ್ರಗಳು, ಉಪಕರಣಗಳು ಹಾಗೂ ತಂತ್ರಜ್ಞಾನದ ಬಲದಿಂದ ಯೋಧರು ಶೌರ್ಯ ಪ್ರದರ್ಶಿಸಿದ್ದಾರೆ ಎಂದು ಹೊಗಳಿದ್ದಾರೆ.
'ಈ ಗೆಲುವು ಸ್ವಾವಲಂಬಿ ಭಾರತದಲ್ಲಿ ಕೊಡುಗೆ ಸಲ್ಲಿಸಿದ ಪ್ರತಿಯೊಬ್ಬ ಎಂಜಿನಿಯರ್, ತಂತ್ರಜ್ಞರು ಹಾಗೂ ನಾಗರಿಕರ ಬೆವರಿನಿಂದ ಕೂಡಿದೆ' ಎಂದು ಹೇಳಿದ್ದಾರೆ.
ಮನ್ ಕೀ ಬಾತ್ ಸಂಪೂರ್ಣ ವಿಡಿಯೊ ಇಲ್ಲಿ ವೀಕ್ಷಿಸಿ
ಗುಜರಾತ್‌ನ ಗಿರ್ ಅರಣ್ಯ ಪ್ರದೇಶದಲ್ಲಿ ಸಿಂಹಗಳ ಸಂಖ್ಯೆಯು 674 ಇದ್ದಿದ್ದು ಐದು ವರ್ಷಗಳಲ್ಲಿ 891ಕ್ಕೆ ಹೆಚ್ಚಳ ಆಗಿದೆ
11 ವರ್ಷಗಳಲ್ಲಿ ದೇಶದಲ್ಲಿ ಜೀನುತುಪ್ಪ ಉತ್ಪಾದನೆಯಲ್ಲಿ ಶೇಕಡ 60ರಷ್ಟು ಹೆಚ್ಚಳ ಆಗಿದೆ
ಉತ್ತರಾಖಂಡದ ಅಂಗವಿಕಲ ಜೀವನ್ ಜೋಷಿ ಎನ್ನುವವರು, ಪೈನ್ ಮರದ ತೊಗಟೆಯಿಂದ ಅಸಾಮಾನ್ಯವಾದ ಕಲಾತ್ಮಕ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.