Operation Sindoor: ಭಾರತದ ದಾಳಿ
ಬೆಂಗಳೂರು: ಭಾರತ, ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆಸಿರುವ ದಾಳಿಯನ್ನು ಪಾಕ್ ದೃಢಪಡಿಸಿದೆ, ಅಲ್ಲಿನ ಪ್ರಧಾನಿ ಷೆಹ್‌ಬಾಜ್ ಷರೀಫ್ ಅವರು ಟ್ವೀಟ್ ಮಾಡಿದ್ದು, ಪಾಕಿಸ್ತಾನದ ಐದು ಸ್ಥಳಗಳ ಮೇಲೆ ದಾಳಿ ಮಾಡಿದೆ ಎಂದು ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿದ್ದಾರೆ.
ʼಕುತಂತ್ರಿ ವೈರಿಯು ಪಾಕಿಸ್ತಾನದ ಐದು ಸ್ಥಳಗಳ ಮೇಲೆ ಹೇಡಿತನದ ದಾಳಿ ನಡೆಸಿದೆ. ಭಾರತ ಹೇರಿರುವ ಈ ಯುದ್ಧ ಕ್ರಮದ ವಿರುದ್ಧ ಶಕ್ತಿಯುವಾದ ಪ್ರತಿಕ್ರಿಯೆ ನೀಡುವ ಎಲ್ಲ ಹಕ್ಕುಗಳೂ ಪಾಕಿಸ್ತಾನಕ್ಕೆ ಇವೆ. ಮತ್ತು ಅತ್ಯಂತ ಪ್ರಬಲ ಪ್ರತಿಕ್ರಿಯೆಯನ್ನು ನೀಡಲಾಗುತ್ತಿದೆ. ಇಡೀ ದೇಶವು ಪಾಕಿಸ್ತಾನ ಸಶಸ್ತ್ರ ಪಡೆಗಳಿಗೆ ಬೆಂಬಲವಾಗಿ ನಿಂತಿದೆ. ಶತ್ರುವನ್ನು ಹೇಗೆ ಎದುರಿಸಬೇಕು ಎಂಬುದು ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದ ಸಶಸ್ತ್ರ ಪಡೆಗಳಿಗೆ ಚೆನ್ನಾಗಿ ಗೊತ್ತಿದೆ. ಶತ್ರುವಿನ ದುಷ್ಟ ಗುರಿಗಳು ಯಶಸ್ವಿಯಾಗುವುದಕ್ಕೆ ನಾವು ಯಾವತ್ತೂ ಬಿಡುವುದಿಲ್ಲʼ ಎಂದು ಅವರು ಉರ್ದುವಿನಲ್ಲಿ ಪೋಸ್ಟ್ ಹಾಕಿದ್ದಾರೆ. ಇದನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ʼಎಕ್ಸ್ʼನಲ್ಲಿ ಪೋಸ್ಟ್ ಹಾಕಿದೆ.
ಗುಂಡಿನ ಚಕಮಕಿ: ನಿರ್ದಿಷ್ಟ ದಾಳಿಯ ಬೆನ್ನಲ್ಲೇ ಗಡಿಯಲ್ಲಿ ಪಾಕಿಸ್ತಾನವು ಭಾರತದತ್ತ ಗುಂಡು ಹಾರಿಸಲು ಆರಂಭಿಸಿದ್ದು, ಎರಡೂ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ.
ಲಷ್ಕರ್ ಎ ತಯಬಾ ಮತ್ತು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದಿಂದ ದಾಳಿ ನಡೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.