
ನವದೆಹಲಿ: ಜೀವನದಲ್ಲಿ ಹಣ ಗಳಿಸುವುದು, ವೈಯಕ್ತಿಕ ಏಳಿಗೆ ಪಡೆಯುವುದಷ್ಟೇ ಅಲ್ಲ; ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಸಂದೇಶವನ್ನು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯು ಜನರಿಗೆ ಮನದಟ್ಟು ಮಾಡಿಕೊಟ್ಟಿದೆ’ ಎಂದು ವಾಯುಸೇನೆಯ ಮುಖ್ಯಸ್ಥ ಅಮರ್‌ಪ್ರೀತ್ ಸಿಂಗ್ ತಿಳಿಸಿದ್ದಾರೆ.
ದೆಹಲಿ ಕಂಟೋನ್ಮೆಂಟ್‌ನ ಗಣರಾಜ್ಯೋತ್ಸದ ಶಿಬಿರದಲ್ಲಿ ಗುರುವಾರ ಎನ್‌ಸಿಸಿ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶಕ್ಕಾಗಿ ಅತ್ಯುತ್ತಮವಾದುದನ್ನು ನೀಡುತ್ತೇನೆ ಎಂದು ಕೆಲಸ ಮಾಡಬೇಕು. ಒಂದೊಮ್ಮೆ ಸೇನೆಗೆ ಸೇರಿದರೆ ಅಥವಾ ತಮ್ಮ ವೃತ್ತಿ ಬದುಕಿನಲ್ಲಿ ಮುಂದುವರಿದರೆ ಈ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತರಾಗಬೇಕು’ ಎಂದು ಸಲಹೆ ನೀಡಿದ್ದಾರೆ.
‘ವೈಫಲ್ಯಗಳಿಂದ ಧೃತಿಗೆಡಬೇಡಿ. ಹಿನ್ನಡೆಯಿಂದ ಮತ್ತೆ ಅತ್ಯಂತ ಶಕ್ತಿಯುತವಾಗಿ ಹೆಜ್ಜೆಯಿಟ್ಟರೆ ಜೀವನದಲ್ಲಿ ಅತ್ಯುನ್ನತ ಹುದ್ದೆಗೆ ಏರಲು ಸಾಧ್ಯ. ನಾನು ಕೂಡ ನನ್ನ ವೃತ್ತಿ ಬದುಕಿನಲ್ಲಿ ಹಲವು ವೈಫಲ್ಯಗಳನ್ನು ಎದುರಿಸಿದ್ದೇನೆ. ಅದೆಲ್ಲವನ್ನೂ ನಿಭಾಯಿಸಿಕೊಂಡು, ವಾಯುಸೇನಾ ಮುಖ್ಯಸ್ಥನಾಗಿ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಯಿತು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಸೇವೆಗೆ ಶ್ಲಾಘನೆ: ಆಪರೇಷನ್ ಸಿಂಧೂರದ ವೇಳೆ ರಕ್ತದಾನ ಒಳಗೊಂಡಂತೆ ನಾಗರಿಕ ರಕ್ಷಣಾ ಚಟುವಟಿಕೆಗಳಲ್ಲಿ ಎನ್‌ಸಿಸಿ ಕೆಡೆಟ್‌ಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದನ್ನು ಅವರು ಶ್ಲಾಘಿಸಿದ್ದಾರೆ.
ಗಣರಾಜ್ಯೋತ್ಸವದ ಪರೇಡ್‌ಗೂ ಮುನ್ನಾ ತಿಂಗಳ ಕಾಲ ನಡೆಯುವ ತರಬೇತಿ ಶಿಬಿರದಲ್ಲಿ ದೇಶದಾದ್ಯಂತ 896 ಬಾಲಕಿಯರು ಸೇರಿದಂತೆ 2,406 ಮಂದಿ ಎನ್‌ಸಿಸಿ ಕೆಡೆಟ್‌ಗಳು ಭಾಗಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.