ನೇಹಾ ಭಂಡಾರಿ
ಪಿಟಿಐ
ಜಮ್ಮು: ಪಾಕ್ ಪ್ರಾಯೋಜಿತ ಉಗ್ರರ ನೆಲೆಗಳ ನಾಶಗೊಳಿಸುವ ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ’ದ ದಿನದ ಬೆಳವಣಿಗೆಯನ್ನು ಕರ್ನಲ್ ಸೋಫಿಯಾ ಖುರೇಷಿ ಮತ್ತು ಗ್ರೂಪ್ ಕ್ಯಾಪ್ಟನ್ ವ್ಯೋಮಿಕಾ ಸಿಂಗ್ ಸುದ್ದಿಗೋಷ್ಠಿಯಲ್ಲಿ ವಿವರಿಸಿ ಇಡೀ ಜಗತ್ತಿಗೇ ದೇಶದ ನಾರಿಶಕ್ತಿಯನ್ನು ಪರಿಚಯಿಸಿದ್ದರು. ಇದೇ ಸಂದರ್ಭದಲ್ಲಿ ಗಡಿಯಲ್ಲಿ ಶತ್ರುಗಳ ನೆಲೆಗಳನ್ನು ನಾಶಗೊಳಿಸಿದ ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ ಹಾಗೂ ಅವರ ಮಹಿಳಾ ತಂಡ ಶತ್ರುಗಳಿಗೆ ‘ಸಿಂಧೂರ’ದ ಸಂದೇಶವನ್ನು ರವಾನಿಸಿದ್ದರು.
ನೇಹಾ ಅವರೊಂದಿಗೆ ಆರು ಮಹಿಳಾ ಸೈನಿಕರು ಹಾಗೂ 19 ಗಡಿ ರಕ್ಷಣಾ ಗಾರ್ಡ್‌ಗಳು ಅಂತರರಾಷ್ಟ್ರೀಯ ಗಡಿ ರೇಖೆಯ ಸಾಂಬಾ–ಆರ್ ಎಸ್ ಪುರ ಅಖನೂರ್ ಸೇನಾ ನೆಲೆಗಳಲ್ಲಿದ್ದು ಶತ್ರುಗಳ ಪ್ರತಿ ದಾಳಿಯನ್ನೂ ಸಮರ್ಥವಾಗಿ ಎದುರಿಸಿ, ಅವರನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಉತ್ತರಾಖಂಡ ಮೂಲದವರಾದ ನೇಹಾ ಭಂಡಾರಿ ಅವರದ್ದು ಸೈನಿಕ ಹಿನ್ನೆಲೆಯ ಕುಟುಂಬ. ಭಾರತೀಯ ಸೇನೆ ಸೇರಿದ ಇವರ ಕುಟುಂಬದ ಮೂರನೇ ತಲೆಮಾರಿನವರು ಇವರು. ‘ನನ್ನ ತಂಡದೊಂದಿಗೆ ಅಂತರರಾಷ್ಟ್ರೀಯ ಗಡಿರೇಖೆಯುದ್ದಕ್ಕೂ ದೇಶದ ರಕ್ಷಣೆ ಮಾಡುವುದು ನಮಗೆ ಹೆಮ್ಮೆಯ ಕ್ಷಣವಾಗಿತ್ತು. ನಾವಿದ್ದ ಸ್ಥಳ ಪಾಕಿಸ್ತಾನದ ನೆಲೆಯಿಂದ 150 ಮೀಟರ್ ದೂರದಲ್ಲಿದೆ ಎಂದು ನೇಹಾ ವಿವರಿಸಿದ್ದಾರೆ.
‘ಭಾರತದ ಕಡೆಯಲ್ಲಿ ನನ್ನ ಉಸ್ತುವಾರಿಯಲ್ಲಿ ಮೂರು ಸೇನಾ ನೆಲೆಗಳಿದ್ದವು. ಶತ್ರುಗಳ ಮೂರು ನೆಲೆಗಳನ್ನು ಗುರುತಿಸಿದೆವು. ನಮ್ಮ ಬಳಿ ಇದ್ದ ಎಲ್ಲಾ ಆಯುಧಗಳಿಂದ ಶತ್ರುಗಳ ಮೇಲೆ ಪ್ರಹಾರ ನಡೆಸಿದೆವು. ನಮ್ಮಲ್ಲಿ ದೇಶಾಭಿಮಾನದ ಕೆಚ್ಚು ಉತ್ತುಂಗದಲ್ಲಿತ್ತು. ದಾಳಿಯ ತೀವ್ರತೆ ತಾಳಲಾರದೆ ಶತ್ರುಗಳು ಓಡಿ ಹೋದರು’ ಎಂದು ತಮ್ಮ ಕಾರ್ಯಾಚರಣೆಯನ್ನು ನೇಹಾ ವಿವರಿಸಿದ್ದಾರೆ.
‘ನಮ್ಮ ಅಜ್ಜ ಸೇನೆಯಲ್ಲಿದ್ದರು. ತಂದೆ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿದ್ದರು. ತಾಯಿಯೂ ಸಿಆರ್‌ಪಿಎಫ್‌ನಲ್ಲಿದ್ದರು. ಹೀಗಾಗಿ ಸಹಜವಾಗಿ ನನ್ನಲ್ಲಿ ದೇಶ ಕಾಯುವ ಕನಸು ಬಾಲ್ಯದಲ್ಲೇ ಬಿತ್ತಿತ್ತು. ಸೇನೆಯಲ್ಲಿ ಪುರುಷ ಸೈನಿಕರಿಗೆ ಸರಿಸಮವಾಗಿ ಮಹಿಳೆಯರೂ ಕಾರ್ಯಾಚರಣೆಯಲ್ಲಿ ತೊಡಗುತ್ತಿದ್ದಾರೆ. ಆಪರೇಷನ್ ಸಿಂಧೂರ ಸಂದರ್ಭದಲ್ಲೂ ಮೂರೂ ದಿನಗಳ ಕಾಲ ಮಹಿಳಾ ಸೈನಿಕರು ಶತ್ರುಗಳ ನಿದ್ದೆಗೆಡಿಸಿದ್ದಾರೆ. ಅವರು ಕದನಕಣದಿಂದ ಓಡಿಹೋಗುವಂತೆ ಮಾಡಿದ್ದಾರೆ’ ಎಂದು ವಿವರಿಸಿದ್ದಾರೆ.
ಆಪರೇಷನ್ ಸಿಂಧೂರದಲ್ಲಿ ಮಹಿಳಾ ಸೈನಿಕರ ಕಾರ್ಯಾಚರಣೆಯನ್ನು ವಿವರಿಸಿದ ಬಿಎಸ್‌ಎಫ್‌ನ ಐಜಿ ಶಶಾಂಕ್ ಆನಂದ್, ‘ಈ ಕಾರ್ಯಾಚರಣೆಯಲ್ಲಿ ಮಹಿಳಾ ತಂಡ ಅದ್ಭುತವಾದ ಕೆಲಸ ಮಾಡಿದೆ. ಪ್ರಧಾನ ಕಚೇರಿಯಲ್ಲಿರುವ ಎಲ್ಲಾ ಅವಕಾಶಗಳೂ ಮಹಿಳಾ ಸೈನಿಕರಿಗೆ ಇತ್ತು. ಆದರೂ ಅವರು ಗಡಿಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುವುದನ್ನು ಆಯ್ಕೆ ಮಾಡಿದರು. ಪುರುಷ ಸೈನಿಕರ ಸಮಬಲಕ್ಕೆ ಇವರೂ ಹೋರಾಡಿದರು’ ಎಂದಿದ್ದಾರೆ.
‘ಆಪರೇಷನ್ ಸಿಂಧೂರದಲ್ಲಿ ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ ಅವರು ಅತ್ಯದ್ಭುತ ಕೆಚ್ಚಿನಲ್ಲಿ ತನ್ನ ನೆಲೆಗಳ ರಕ್ಷಣೆಯ ಜತೆಗೆ, ಶತ್ರುಗಳ ನೆಲಗಳನ್ನು ನಾಶಗೊಳಿಸಿದ್ದಾರೆ. ಆ ಮೂಲಕ ದೇಶದ ಗಡಿಯನ್ನು ರಕ್ಷಿಸುವ ಮಹತ್ವದ ಕಾರ್ಯದಲ್ಲಿ ಸಫಲತೆ ಸಾಧಿಸಿದ್ದಾರೆ’ ಎಂದಿದ್ದಾರೆ.
ಅನಿತಾ ಅವರಂತೆಯೇ ಕಾನ್‌ಸ್ಟೆಬಲ್‌ಗಳಾದ ಶಂಕರಿ ದಾಸ್, ಸ್ವಪ್ನಾ ರಾತ್, ಅನಿತಾ, ಸುಮಿ, ಮಿಲ್ಕಿತ್ ಕೌರ್ ಹಾಗೂ ಮಂಜಿತ್ ಕೌರ್ ಅವರೂ ಬಂದೂಕು ಹಿಡಿದು ಗಡಿಯಲ್ಲಿ ಹೋರಾಡಿದ್ದಾರೆ. ‘ಸೇನೆಯ ಮುಂಚೂಣಿಯಲ್ಲಿರುತ್ತಿದ್ದ ಪುರುಷರು ನಿರ್ವಹಿಸುವ ಕಾರ್ಯವನ್ನು ನಾವು ನಿರ್ವಹಿಸಿದ್ದು ಹೆಮ್ಮೆಯ ಸಂಗತಿ. ಇದು ನಿಜಕ್ಕೂ ನಮ್ಮೊಳಗಿನ ಆತ್ಮಾಭಿಮಾನವನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದಿದ್ದಾರೆ.
ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆಯ ಅಪ್ರಚೋದಿತ ದಾಳಿ ಯತ್ನಕ್ಕೆ ಪ್ರತಿಯಾಗಿ ಆಪರೇಷನ್ ಸಿಂಧೂರವನ್ನು ಮುಂದುವರಿಸಿರುವ ಗಡಿ ರಕ್ಷಣಾ ಪಡೆಯು, ಪಾಕಿಸ್ತಾನದ 76 ಸೇನಾ ನೆಲೆ ಹಾಗೂ 42 ಮುಂಚೂಣಿ ರಕ್ಷಣಾ ನೆಲೆ (ಎಫ್‌ಡಿಎಲ್) ಗಳನ್ನು ಗುರಿಯಾಗಿಸಿ ಪ್ರತಿ ದಾಳಿ ನಡೆಸಿದೆ. ಜತೆಗೆ ಭಯೋತ್ಪಾದಕರ ಮೂರು ಲಾಂಚ್ ಪ್ಯಾಡ್‌ಗಳನ್ನು ನಾಶಪಡಿಸಿದೆ.
ಜಮ್ಮು ಮತ್ತು ಕಾಶ್ಮಿರದ ಅನಂತನಾಗ್ ಜಿಲ್ಲೆಯ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದರು. 26 ಜನರು ಹತ್ಯೆಯಾಗಿ, ಹಲವರು ಗಾಯಗೊಂಡಿದ್ದರು.
ಎರಡು ವಾರದ ನಂತರ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ, ಉಗ್ರರ ಕೆಲವು ನೆಲೆಗಳು ಹಾಗೂ ನೂರಾರು ಭಯೋತ್ಪಾದಕರನ್ನ ಹತ್ಯೆಗೈದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.