ರಾಜ್ಯಸಭೆ
ನವದೆಹಲಿ: ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಕಾರ್ಯಕ್ರಮದಲ್ಲಿ ‘ವಿವಾದಿತ ಹೇಳಿಕೆ’ ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಕೋರಿ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ನೋಟಿಸ್ ನೀಡಿವೆ.
ಈ ನೋಟಿಸ್‌ಗೆ ವಿರೋಧಪಕ್ಷಗಳ 55 ಸದಸ್ಯರು ಸಹಿ ಹಾಕಿದ್ದಾರೆ. ಪ್ರಮುಖವಾಗಿ ಇವರಲ್ಲಿ ಕಪಿಲ್ ಸಿಬಲ್, ವಿವೇಕ್ ತಂಕಾ, ದಿಗ್ವಿಜಯ ಸಿಂಗ್, ಜಾನ್ ಬ್ರಿಟ್ಟಾಸ್, ಮನೋಜ್ ಕುಮಾರ್ ಝಾ ಮತ್ತು ಸಾಕೇತ್ ಗೋಖಲೆ ಅವರು ಸೇರಿದ್ದಾರೆ.
ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ಅವರನ್ನು ಶುಕ್ರವಾರ ಭೇಟಿಯಾಗಿದ್ದ ಸದಸ್ಯರು ನೋಟಿಸ್ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ. ನ್ಯಾಯಮೂರ್ತಿಗಳ (ವಿಚಾರಣೆ) ಕಾಯ್ದೆ 1968 ಮತ್ತು ಸಂವಿಧಾನದ ವಿಧಿ 218ರ ಅನ್ವಯ ನೋಟಿಸ್ ನೀಡಲಾಗಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ಯಾದವ್ ಅವರು ಇತ್ತೀಚೆಗೆ ವಿಎಚ್‌ಪಿ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆಯು ‘ಕೋಮುಸೌಹಾರ್ದಕ್ಕೆ ಧಕ್ಕೆ ಉಂಟು ಮಾಡಲಿದೆ ಮತ್ತು ಸಂವಿಧಾನದ ಉಲ್ಲಂಘನೆಯೂ ಆಗಿದೆ’ ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.