ADVERTISEMENT

ವಿರೋಧ ಪಕ್ಷಗಳಿಗೆ ಕಲಾಪ ಮುಂದುವರಿಯುವುದು ಬೇಕಿಲ್ಲ: ಬಿಜೆಪಿ

ಪಿಟಿಐ
Published 20 ಡಿಸೆಂಬರ್ 2021, 12:39 IST
Last Updated 20 ಡಿಸೆಂಬರ್ 2021, 12:39 IST
ಪ್ರಲ್ಹಾದ್ ಜೋಶಿ (ಬಲದರಿಂದ), ಎ.ಆರ್‌.ಮೇಘವಾಲ್, ಪಿಯೂಷ್ ಗೋಯಲ್, ಅನುರಾಗ್ ಠಾಕೂರ್ ಮತ್ತು ಅನಿಲ್ ಬಲುನಿ –ಪಿಟಿಐ ಚಿತ್ರ
ಪ್ರಲ್ಹಾದ್ ಜೋಶಿ (ಬಲದರಿಂದ), ಎ.ಆರ್‌.ಮೇಘವಾಲ್, ಪಿಯೂಷ್ ಗೋಯಲ್, ಅನುರಾಗ್ ಠಾಕೂರ್ ಮತ್ತು ಅನಿಲ್ ಬಲುನಿ –ಪಿಟಿಐ ಚಿತ್ರ   

ನವದೆಹಲಿ: ರಾಜ್ಯಸಭೆಯಲ್ಲಿರುವವಿರೋಧ ಪಕ್ಷಗಳು 'ಅಡ್ಡಿ ಮತ್ತು ಅಡಚಣೆ' ಮಾಡುವ ಮಂತ್ರದೊಂದಿಗೆ ಮುನ್ನಡೆಯುತ್ತಿವೆ. ಕಲಾಪ ಮುಂದುವರಿಯುವುದು ಅವುಗಳಿಗೆ ಬೇಕಾಗಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ರಾಜ್ಯಸಭೆಯ12 ಸದಸ್ಯರ ಅಮಾನತು ಆದೇಶವನ್ನು ವಿರೋಧಿಸಿ ಪ್ರತಿಭಟಿಸಿದ್ದ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನಾ, ಈ ವಿಚಾರವಾಗಿ ಚರ್ಚಿಸಲು ಸರ್ಕಾರವು ಎಲ್ಲ ವಿರೋಧ ಪಕ್ಷಗಳ ಸಭೆ ಕರೆಯಬೇಕು ಎಂದು ಕಳೆದ ಕಲಾಪದಲ್ಲಿ ಒತ್ತಾಯಿಸಿದ್ದವು. ಅದರಂತೆ ಸರ್ಕಾರ ಕರೆದಿರುವ ಸಭೆಗೆ ಐದು ವಿರೋಧ ಪಕ್ಷಗಳ ನಾಯಕರು ಹಾಜರಾಗಿಲ್ಲ.

ಇದನ್ನು ಉಲ್ಲೇಖಿಸಿ ಬಿಜೆಪಿಯ ರಾಜ್ಯಸಭಾ ನಾಯಕ ಪಿಯೂಷ್‌ ಗೋಯಲ್‌, ಕಲಾಪ ನಡೆಯುವುದು ವಿರೋಧ ಪಕ್ಷಗಳಿಗೆ ಇಷ್ಟವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅಡ್ಡಿ ಮತ್ತು ಅಡಚಣೆ ಮಾಡುವುದನ್ನು ಬಿಟ್ಟು ಅವರ ಬಳಿ ಬೇರೇನೂ ಇಲ್ಲ ಎಂದು ಟೀಕಿಸಿದ್ದಾರೆ.

ಸರ್ಕಾರ ಎಲ್ಲರನ್ನೂ ಸಭೆಗೆ ಆಹ್ವಾನಿಸಿದೆ. ಸಭೆಯಲ್ಲಿ ಅವರು (ವಿರೋಧ ಪಕ್ಷದವರು) ತಮ್ಮ ವಿಚಾರಗಳನ್ನು ಹೇಳಬಹುದಾಗಿದೆ. ರಾಜ್ಯಸಭೆಯ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರ ಸೂಚನೆಯ ಮೇರೆಗೆ ಸರ್ಕಾರ ಸಭೆ ಕರೆದಿದೆ. ಎರಡೂ (ಆಡಳಿತ ಮತ್ತು ವಿರೋಧ ಪಕ್ಷದ) ಬಣದವರು ಒಂದೆಡೆ ಸೇರಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ನಾಯ್ಡು ಅವರ ಉದ್ದೇಶವಾಗಿತ್ತು. ಆದರೆ,ಐದು ವಿರೋಧ ಪಕ್ಷಗಳು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದ್ದಾರೆ.

2010ರಲ್ಲಿ ಏಳು ಸಂಸದರ ಅಮಾನತು ಗೊಳಿಸಲಾಗಿತ್ತು. ತದನಂತರ ಆದೇಶವನ್ನು ಹಿಂಪಡೆಯಲಾಗಿತ್ತು ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಗೋಯಲ್, ಆಗ ವಿರೋಧ ಪಕ್ಷದ ನಾಯಕರಾಗಿದ್ದ ಅರುಣ್‌ ಜೇಟ್ಲಿ ಕ್ಷಮೆ ಕೇಳಿದ ಬಳಿಕವೇ ಅಮಾನತು ಆದೇಶ ಹಿಂಪಡೆದದ್ದು ಎಂದು ತಿಳಿಸಿದ್ದಾರೆ.

ಮುಂದುವರಿದು, ಅಮಾನತು ಆಗಿದ್ದ ಏಳೂ ಸದಸ್ಯರು ಬೇರೆ ಪಕ್ಷದವರು. ಆದಾಗ್ಯೂ, ಜೇಟ್ಲಿ ಅವರು ವಿರೋಧ ಪಕ್ಷದ ನಾಯಕರಾಗಿ ವಿಷಾಧ ವ್ಯಕ್ತಪಡಿಸಿದ್ದರು ಎಂದು ನೆನಪಿಸಿದ್ದಾರೆ.

ಸದ್ಯ ಅಮಾನತಾಗಿರುವ 12 ಸದಸ್ಯರು ಸದನವನ್ನು ಮುಂದುವರಿಸುವ ಸಲುವಾಗಿ ಮತ್ತು ಪೀಠದ ಘನತೆ ಕಾಪಾಡುವುದಕ್ಕಾಗಿ ಕ್ಷಮೆ ಕೋರಬೇಕು. ಇದರಿಂದ ಅವರ ಗೌರವಕ್ಕೇನೂ ಕುಂದುಂಟಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

ಗೋಯಲ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಸಂಸದ ಅನಿಲ್ ಬಲುನಿ ಅವರು, ಅಮಾನತಾದ ಸದಸ್ಯರು ಸದನದ ಕಲಾಪದಲ್ಲಿ ಭಾಗಿಯಾಗುವ ಮುನ್ನ ಕ್ಷಮೆ ಕೇಳುವುದು ಕಳೆದ ಆರು ದಶಕಗಳಿಂದಲೂ ನಡೆದು ಬಂದಿದೆ ಎಂದಿದ್ದಾರೆ.

ಅಶಿಸ್ತು ತೋರಿದ ಆರೋಪದ ಮೇಲೆ ರಾಜ್ಯಸಭೆಯ12 ಸದಸ್ಯರನ್ನು ನ.29ರಂದು ಅಮಾನತು ಮಾಡಲಾಗಿದೆ. ಇದನ್ನು ವಿರೋಧಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಸದನವನ್ನು ನಿರಂತರವಾಗಿ ಮುಂದೂಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.