ADVERTISEMENT

ಲೋಕಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ ಕೃಷಿ ಕಾನೂನುಗಳು: ಪ್ರತಿಪಕ್ಷಗಳ ಘೋಷಣೆ

ಪಿಟಿಐ
Published 29 ಜನವರಿ 2021, 11:08 IST
Last Updated 29 ಜನವರಿ 2021, 11:08 IST
ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ಪಕ್ಷದ ಮುಖಂಡರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.
ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ಪಕ್ಷದ ಮುಖಂಡರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.   

ನವದೆಹಲಿ: ಬಜೆಟ್ ಅಧಿವೇಶನದ ಮೊದಲ ದಿನ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ವಿವಿಧ ವಿರೋಧ ಪಕ್ಷಗಳ ಸದಸ್ಯರು ಶುಕ್ರವಾರ ಲೋಕಸಭೆಯಲ್ಲಿ ಘೋಷಣೆಗಳನ್ನು ಕೂಗಿದರು.

ರೈಲ್ವೇ ಖಾತೆ‌ ರಾಜ್ಯ ಸಚಿವರಾಗಿದ್ದ ದಿವಂಗತ ‌ಸುರೇಶ್ ಅಂಗಡಿ ಮತ್ತು ಜಸ್ವಂತ್ ಸಿಂಗ್, ತರುಣ್ ಗೊಗೊಯ್, ಮೋತಿಲಾಲ್ ವೊರಾ, ಅಹ್ಮದ್ ಪಟೇಲ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ 26 ಮಾಜಿ ಸದಸ್ಯರಿಗೆ ಸದನ ಗೌರವ ಸಲ್ಲಿಸಿದ ಕೂಡಲೇ ಕಾಂಗ್ರೆಸ್, ಡಿಎಂಕೆ ಮತ್ತು ಎಡ ಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಿದರು.

ಶಿವಸೇನೆ ಸದಸ್ಯರು ತಮ್ಮ ಸೀಟುಗಳಲ್ಲೇ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಪ್ರತಿಪಕ್ಷಗಳ ಸದಸ್ಯರು ಒತ್ತಾಯಿಸಿದರು. ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆ ವೇಳೆ ಮೃತಪಟ್ಟ ರೈತರಿಗೆ ಸದನದಲ್ಲಿ ಸಂತಾಪ ಸೂಚಿಸಬೇಕು ಎಂದು ಅವರು ಒತ್ತಾಯಿಸುತ್ತಿದ್ದರು.

ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಪ್ರತಿಭಟನಾ ನಿರತ ರೈತರ ಬೇಡಿಕೆಯನ್ನು ಬೆಂಬಲಿಸಿ ಸಂಸತ್ತಿನ ಬಜೆಟ್‌ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಮಾಡಿದ ಭಾಷಣವನ್ನು 20ಕ್ಕೂ ಹೆಚ್ಚು ವಿರೋಧ ಪಕ್ಷಗಳು ಬಹಿಷ್ಕರಿಸಿದವು. ರಾಷ್ಟ್ರಪತಿ ಮಾಡಿದ ಭಾಷಣವನ್ನು ಬಹಿಷ್ಕರಿಸಲು ಕಾಂಗ್ರೆಸ್‌, ಎನ್‌ಸಿಪಿ, ಶಿವಸೇನಾ, ಟಿಎಂಸಿ, ಬಿಎಸ್‌ಪಿ ಸೇರಿ 16 ವಿರೋಧ ಪಕ್ಷಗಳು ನಿರ್ಧರಿಸಿದ್ದವು. ಭಾಷಣವನ್ನು ಬಹಿಷ್ಕರಿಸುವುದಾಗಿ ಆಮ್‌ ಅದ್ಮಿ ಪಕ್ಷವು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿತ್ತು.

ಸದನದ ಸ್ಪೀಕರ್ ವೇದಿಕೆಯ ಬಳಿಯ ಬಾವಿಯಲ್ಲಿ ತಮ್ಮ ಸಹೋದ್ಯೋಗಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾಗ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸದನದಲ್ಲಿಯೇ ಹಾಜರಿದ್ದರು.

ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಭಟನೆ ನಡೆಸುತ್ತಿರುವ ಸದಸ್ಯರು ತಮ್ಮ ಆಸನಗಳಿಗೆ ಮರಳಬೇಕು ಮತ್ತು ಅಂತರ ಕಾಪಾಡಿಕೊಳ್ಳುವ ಮಾನದಂಡಗಳು ಒಳಗೊಂಡಂತೆ ಕೋವಿಡ್-19 ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಒತ್ತಾಯಿಸಿದರು.

ಸದನ ಸಭೆ ಸೇರಿದ ಕೂಡಲೇ ಜೆಡಿಯು ಸದಸ್ಯ ಸುನಿಲ್ ಕುಮಾರ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಕಳೆದ ವರ್ಷದ ಕೊನೆಯಲ್ಲಿ ವಾಲ್ಮೀಕಿ ನಗರದ ಲೋಕಸಭಾ ಸ್ಥಾನದ ಉಪಚುನಾವಣೆಯಲ್ಲಿ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.