ನವದೆಹಲಿ: ದುಬೈನಲ್ಲಿ ಭಾನುವಾರ ನಡೆದ ಪಾಕಿಸ್ತಾನ ಮತ್ತು ಭಾರತ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ವಿಚಾರ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಭಾನುವಾರ ಟೀಕಾಪ್ರಹಾರ ನಡೆಸಿವೆ.
‘ಪಾಕ್ ವಿರುದ್ಧ ಭಾರತ ತಂಡ ಕ್ರಿಕೆಟ್ ಆಡಲು ಅವಕಾಶ ನೀಡಿರುವುದು ‘ದೇಶದ್ರೋಹ’ ಎಂದಿರುವ ವಿಪಕ್ಷಗಳು, ‘ತನ್ನ ಆದ್ಯತೆಗಳಿಗೆ ಸಂಬಂಧಿಸಿ ಆಡಳಿತಾರೂಢ ಪಕ್ಷದ ನಿಲುವಿನಲ್ಲಿನ ಬದಲಾವಣೆಯನ್ನು ಇದು ಬಹಿರಂಗಪಡಿಸಿದೆ’ ಎಂದು ವಾಗ್ದಾಳಿ ನಡೆಸಿವೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಉಗ್ರರು ದಾಳಿ ನಡೆಸಿ 26 ಜನರನ್ನು ಹತ್ಯೆ ಮಾಡಿದ ಘಟನೆ ಬಳಿಕ, ಉಭಯ ದೇಶಗಳ ಕ್ರಿಕೆಟ್ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿವೆ.
ಯಾವುದೇ ಕಾರಣಕ್ಕೂ ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ ಆಡಬಾರದು ಎಂಬುದು ಕೆಲ ರಾಜಕೀಯ ಪಕ್ಷಗಳು ಹಾಗೂ ಕ್ರೀಡಾಭಿಮಾನಿಗಳ ಬೇಡಿಕೆಯಾಗಿದೆ. ಅಲ್ಲದೇ, ದುಬೈನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಭಾರತ ತಂಡಕ್ಕೆ ಅನುಮತಿ ನೀಡುವ ಮೂಲಕ ಬಿಸಿಸಿಐ ಹಣ ಮಾಡಲು ಯತ್ನಿಸುತ್ತಿದೆ ಎಂದೂ ಆರೋಪಿಸಿದ್ದಾರೆ.
ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಉಭಯ ದೇಶಗಳ ನಡುವಿನ ಕ್ರಿಕೆಟ್ ಪಂದ್ಯವನ್ನು ವಿರೋಧಿಸಿದೆ. ‘ಈ ವಿಚಾರದಲ್ಲಿ ಪ್ರತಿಯೊಬ್ಬ ಭಾರತೀಯನಲ್ಲಿ ಭಾರಿ ಆಕ್ರೋಶ ಇದೆ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಟೀಕಿಸಿದ್ದಾರೆ.
‘ಕೇಂದ್ರ ಸರ್ಕಾರಕ್ಕೆ ಸಹಾನುಭೂತಿ ಮತ್ತು ಸಂವೇದನಾಶೀಲತೆ ಮುಖ್ಯವಾಗಲಿಲ್ಲ. ಅದು ಲಾಭ ಮತ್ತು ದುಂದುಗಾರಿಕೆಗೆ ಆದ್ಯತೆ ನೀಡಿದೆ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕ ಗೌರವ್ ಗೊಗೋಯಿ ಹೇಳಿದ್ದಾರೆ.
ನಿರಾಕರಣೆ: ಈ ನಡುವೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ವಿರೋಧಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಶಿವಸೇನಾ(ಯುಬಿಟಿ) ಕಾರ್ಯಕರ್ತರಿಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದರು.
‘ಪ್ರತಿಭಟನೆಗೆ ಅನುಮತಿ ಕೋರಿ ಶಿವಸೇನಾ(ಯುಬಿಟಿ) ಶನಿವಾರವಷ್ಟೆ ಮನವಿ ಸಲ್ಲಿಸಿದೆ. ನಿಯಮಗಳ ಪ್ರಕಾರ, ಪ್ರತಿಭಟನೆ ನಡೆಯುವ ದಿನಾಂಕಕ್ಕಿಂತ ಕನಿಷ್ಠ 10 ದಿನ ಮೊದಲು ಅರ್ಜಿ ಸಲ್ಲಿಸಬೇಕು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ಕಾನೂನಿಗೆ ನಾವು ಗೌರವ ಕೊಡುತ್ತೇವೆ. ಆದರೆ, ಪ್ರಜಾತಾಂತ್ರಿಕ ಮಾರ್ಗಗಗಳ ಮೂಲಕ ನಮ್ಮ ಕಳವಳಗಳನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸುವುದಿಲ್ಲ’ ಎಂದು ಶಿವಸೇನಾ(ಯುಬಿಟಿ) ದೆಹಲಿ ಘಟಕದ ಮುಖ್ಯಸ್ಥ ಮಂಗತ್‌ರಾಮ್ ಮುಂಡೆ ಪ್ರತಿಕ್ರಿಯಿಸಿದ್ದಾರೆ.
ಸಮರ್ಥನೆ: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ಕೇಂದ್ರ ಸಚಿವ ಮನೋಹರಲಾಲ್ ಖಟ್ಟರ್ ಸಮರ್ಥಿಸಿಕೊಂಡಿದ್ದಾರೆ.
‘ಕ್ರಿಕೆಟ್ ಆಡುವುದು ಹಾಗೂ ಪಹಲ್ಗಾಮ್ ದಾಳಿ ಎರಡೂ ಬೇರೆ ವಿಚಾರಗಳು. ಆಟಗಾರರು ಬಹಳ ಶ್ರಮವಹಿಸಿ ಸಿದ್ಧರಾಗಿದ್ದಾರೆ. ಕ್ರಿಕೆಟ್ ಭಾವನಾತ್ಮಕ ವಿಚಾರ. ಹೀಗಾಗಿ, ಈ ವಿಷಯದಲ್ಲಿ ಬಹಳಷ್ಟು ಆಲೋಚನೆ ಬಳಿಕವಷ್ಟೆ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಖಟ್ಟರ್ ಹೇಳಿದ್ದಾರೆ.
‘ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ಹತರಾದ 26 ಜನರ ಜೀವಕ್ಕಿಂತ ಹಣದ ಮೌಲ್ಯ ಹೆಚ್ಚೇ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಎಎಪಿ ಪ್ರತಿಭಟನೆ:
ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ವಿರೋಧಿಸಿ ಎಎಪಿ ಮಹಿಳಾ ಕಾರ್ಯಕರ್ತರು ಭಾನುವಾರ ಇಲ್ಲಿ ಪ್ರತಿಭಟಿಸಿದರು.
ಜನರು ಅನುಭವಿಸುತ್ತಿರುವ ಯಾತನೆಗಿಂತ ಹಣ ಗಳಿಸುವುದೇ ಮುಖ್ಯ ಎಂಬುದನ್ನು ಕೇಂದ್ರ ಸರ್ಕಾರ ತೋರಿಸಿಕೊಟ್ಟಿದೆ. ಇದು ದೇಶದ ಜನರ ಭಾವನೆಗಳಿಗೆ ಮಾಡಿದ ಅವಮಾನ ಹಾಗೂ ವಂಚನೆ ಗೌರವ್ಗೊಗೋಯಿ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ
ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಮಾತುಕತೆ ಮತ್ತು ಉಗ್ರವಾದ ಒಟ್ಟಿಗೆ ಸಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಗಾದರೆ ಒಂದು ಪಂದ್ಯದಿಂದ ಬಿಸಿಸಿಐ ಗಳಿಸುವ ಹಣವೆಷ್ಟು? ₹2 ಸಾವಿರ ಕೋಟಿಯೇ ₹3 ಸಾವಿರ ಕೋಟಿಯೇ?ಅಸಾದುದ್ದೀನ್ ಓವೈಸಿ ಎಐಎಂಐಎಂ ಮುಖ್ಯಸ್ಥ
‘ಆಪರೇಷನ್ ಸಿಂಧೂರ’ ಮುಗಿದಿಲ್ಲ ಅದು ಮುಂದುವರಿಯುತ್ತಿದೆ ಎಂದು ಮೋದಿ ಹೇಳಿದ್ದಾರೆ. ಹಾಗಾದರೆ ಅದುಹೇಗೆ ಆಪರೇಷನ್ ಕ್ರಿಕೆಟ್ ನಡೆಯುತ್ತಿದೆ?ಸಂಜಯ ಸಿಂಗ್ ರಾಜ್ಯಸಭೆಯಲ್ಲಿ ಎಎಪಿ ಸದನನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.