ADVERTISEMENT

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಸರ್ಕಾರಿ ನೌಕರರಿಗೆ ಒಪಿಎಸ್: ಅಶೋಕ್ ಗೆಹಲೋತ್‌

ಐದು ಗ್ಯಾರಂಟಿ ಘೋಷಿಸಿದ ರಾಜಸ್ಥಾನ ಮುಖ್ಯಮಂತ್ರಿ 

ಪಿಟಿಐ
Published 27 ಅಕ್ಟೋಬರ್ 2023, 15:32 IST
Last Updated 27 ಅಕ್ಟೋಬರ್ 2023, 15:32 IST
ಅಶೋಕ್ ಗೆಹಲೋತ್‌ (ಪಿಟಿಐ ಸಂಗ್ರಹ ಚಿತ್ರ)
ಅಶೋಕ್ ಗೆಹಲೋತ್‌ (ಪಿಟಿಐ ಸಂಗ್ರಹ ಚಿತ್ರ)   

ಜೈಪುರ (ಪಿಟಿಐ): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್), ಹಸುವಿನ ಸಗಣಿ ಖರೀದಿಸುವುದು ಮತ್ತು ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ವಿತರಣೆ ಸೇರಿದಂತೆ ಐದು  ‘ಗ್ಯಾರಂಟಿ’ಗಳನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಶುಕ್ರವಾರ ಘೋಷಿಸಿದ್ದಾರೆ.

ಇಂಗ್ಲಿಷ್ ಮಾಧ್ಯಮದಲ್ಲಿ ಶಾಲಾ ಶಿಕ್ಷಣ, ‘ಗೋಧನ್ ಯೋಜನೆ’ ಅಡಿ ಕೆ.ಜಿ.ಗೆ ₹2 ಕ್ಕೆ ಹಸುವಿನ ಸಗಣಿ ಖರೀದಿಸುವುದು ಮತ್ತು ನೈಸರ್ಗಿಕ ವಿಪತ್ತುಗಳಿಂದ ಆಗುವ ನಷ್ಟಕ್ಕೆ ₹15 ಲಕ್ಷ ವಿಮಾ ರಕ್ಷಣೆಯ ಭರವಸೆ ನೀಡಿದರು. ಮೂರು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಎರಡು ಭರವಸೆಗಳನ್ನು ಘೋಷಿಸಿತ್ತು. 

ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಖಚಿತಪಡಿಸಿಕೊಳ್ಳಲು ಕಾನೂನು ಅಂಗೀಕರಿಸಲಾಗುವುದು. ಇದರಿಂದ ಭವಿಷ್ಯದ ಯಾವುದೇ ಆಡಳಿತವು ಒಪಿಎಸ್ ಅನ್ನು ತಡೆಯಲು ಸಾಧ್ಯವಿಲ್ಲ. ‌ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮೊದಲ ವರ್ಷದಲ್ಲಿ ಟ್ಯಾಬ್ಲೆಟ್ ಅಥವಾ ಲ್ಯಾಪ್ ಟಾಪ್ ನೀಡಲಾಗುವುದು ಎಂದು ಅವರು ಹೇಳಿದರು.

ADVERTISEMENT

ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ನ ‘ಗ್ಯಾರಂಟಿ ಮಾದರಿ’ಯನ್ನು ಅನುಸರಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ, ಅದರಲ್ಲಿ ಹೆಚ್ಚಿನ ಘೋಷಣೆ ಮಾಡಲಾಗುವುದು ಎಂದರು.

ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಗೆಹಲೋತ್‌, ಮುಖ್ಯಮಂತ್ರಿಯೊಬ್ಬರು (ಭೂಪೇಶ್ ಬಘೆಲ್) ನಾಯಿಗಳಿಗಿಂತ ಹೆಚ್ಚಾಗಿ ಇ.ಡಿ ದೇಶದಲ್ಲಿ ಅಲೆದಾಡುತ್ತಿದೆ ಎಂದು ಹೇಳಬೇಕಾಯಿತು. ಇದಕ್ಕಿಂತ ದೊಡ್ಡ ದುರದೃಷ್ಟ ಮತ್ತೇನಿದೆ? ಎಂದು ಅವರು ಪ್ರಶ್ನಿಸಿದರು.

‘ತನಿಖಾ ಸಂಸ್ಥೆಗಳು ರಾಜಕೀಯ ಅಸ್ತ್ರವಾಗಿ ಮಾರ್ಪಟ್ಟಿವೆ. ಮೋದಿ ಅವರೇ ನಿಮಗೆ ಅರ್ಥವಾಗುತ್ತಿಲ್ಲ, ನಿಮ್ಮ ಕ್ಷಣಗಣನೆ ಪ್ರಾರಂಭವಾಗಿದೆ. ಬಿಜೆಪಿ ವಿರುದ್ಧ ಸಾಕಷ್ಟು ಧ್ವನಿ ಎತ್ತಿದ್ದರಿಂದ ಇ.ಡಿ ನನ್ನನ್ನು ಗುರಿಯಾಗಿಸಿಕೊಂಡಿದೆ’ ಎಂದು ಗೆಹಲೋತ್ ಹೇಳಿದರು. 

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಗುರುವಾರ ದಾಳಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.