ADVERTISEMENT

ವಿದೇಶಗಳಿಗೆ ಕೋವಿಡ್‌ ಲಸಿಕೆ ರಫ್ತು: ಬಿಜೆಪಿ ಸಮರ್ಥನೆ

ಪಿಟಿಐ
Published 12 ಮೇ 2021, 20:10 IST
Last Updated 12 ಮೇ 2021, 20:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಕೋವಿಡ್‌ ಲಸಿಕೆ ತಯಾರಿಸುತ್ತಿರುವ ದೇಶದ ಎರಡು ಕಂಪನಿಗಳು ವಿದೇಶಗಳಿಗೆ ರಫ್ತು ಮಾಡಿರುವ ಲಸಿಕೆಯಲ್ಲಿ ಶೇ 84ಕ್ಕೂ ಹೆಚ್ಚಿನ ಭಾಗವನ್ನು ಅವುಗಳು ಮಾಡಿಕೊಂಡ ವಾಣಿಜ್ಯ ಒಪ್ಪಂದದ ಬಾಧ್ಯತೆಯ ಭಾಗವಾಗಿ ಕಳುಹಿಸಲಾಗಿದೆ. ಕಾಂಗ್ರೆಸ್‌ ಹಾಗೂ ಎಎಪಿ ಮುಖಂಡರು ಈ ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ವರ್ಚುವಲ್ ಮಾಧ್ಯಮದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ‘ವಿವಿಧ ದೇಶಗಳಿಗೆ ನೆರವಿನ ರೂಪದಲ್ಲಿ ಭಾರತವು 1.07 ಕೋಟಿ ಲಸಿಕೆಗಳನ್ನು ಕಳುಹಿಸಿದೆ. ಅದರಲ್ಲಿ 78.5 ಲಕ್ಷ ಲಸಿಕೆಗಳನ್ನು ನೆರೆರಾಷ್ಟ್ರಗಳಿಗೆ ನೀಡಲಾಗಿದೆ. ಸುರಕ್ಷಿತವಾದ ನೆರೆರಾಷ್ಟ್ರವನ್ನು ಹೊಂದುವುದು ಭಾರತದ ದೃಷ್ಟಿಯಿಂದಲೂ ಒಳ್ಳೆಯದೇ ಎಂದರು.

‘ಎರಡು ಲಕ್ಷಕ್ಕೂ ಅಧಿಕ ಡೋಸ್‌ಗಳನ್ನು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಕಳುಹಿಸಲಾಗಿದೆ. ಆ ಪಡೆಯಲ್ಲಿ ಭಾರತದ 6,600 ಯೋಧರಿದ್ದಾರೆ.ತಯಾರಿಕಾ ಕಂಪನಿಗಳು ಮಾಡಿಕೊಂಡಿರುವ ಒಪ್ಪಂದದ ಬಾಧ್ಯತೆಯ ಭಾಗವಾಗಿ 5.50 ಕೋಟಿ ಡೋಸ್‌ಗಳಷ್ಟು ಲಸಿಕೆ ರಫ್ತು ಮಾಡಲಾಗಿದೆ. ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದಲ್ಲಿ ತಯಾರಿಸಲಾಗಿರುವ ಕೋವಿಶೀಲ್ಡ್‌ ಲಸಿಕೆಯ ಬೌದ್ಧಿಕ ಆಸ್ತಿ ಹಕ್ಕು ಅದರ ಪಾಲುದಾರ ಸಂಸ್ಥೆ ಅಸ್ಟ್ರಾಜೆನೆಕಾದ ಬಳಿಯಲ್ಲಿದೆ. ಆದ್ದರಿಂದ ತಯಾರಿಸಿದ ಲಸಿಕೆಯ ಒಂದು ಭಾಗವನ್ನು ರಫ್ತು ಮಾಡುವ ಬಾಧ್ಯತೆ ಆ ಸಂಸ್ಥೆಗೆ ಇದೆ.ಕೋವ್ಯಾಕ್ಸಿನ್‌ ಲಸಿಕೆ ತಯಾರಿಸುತ್ತಿರುವ ಭಾರತ್‌ ಬಯೊಟೆಕ್ ಸಂಸ್ಥೆಯು ಲಸಿಕೆಗೆ ಬೇಕಾದ ಕಚ್ಚಾ ವಸ್ತು ಆಮದು ಮಾಡಿಕೊಳ್ಳಲು ವಿದೇಶಿ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಅದರ ಭಾಗವಾಗಿ ಒಂದಷ್ಟು ಪ್ರಮಾಣದ ಲಸಿಕೆಯನ್ನು ರಫ್ತು ಮಾಡಬೇಕಾದ ಬಾಧ್ಯತೆ ಇದೆ’ ಎಂದು ಪಾತ್ರಾ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.