ADVERTISEMENT

1.73 ಲಕ್ಷ ಹೆಕ್ಟೇರ್‌ ಅರಣ್ಯ ಜಮೀನು ಪರಿವರ್ತನೆ: ಪರಿಸರ ಸಚಿವಾಲಯ ಮಾಹಿತಿ

2014ರಿಂದ 2024ರವರೆಗೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಾಗಿ ಈ ಕ್ರಮ: ಕೇಂದ್ರ

ಪಿಟಿಐ
Published 21 ಜುಲೈ 2025, 16:07 IST
Last Updated 21 ಜುಲೈ 2025, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿವಿಧ ಮೂಲಸೌಕರ್ಯ ಅಭಿವೃದ್ದಿ ಯೋಜನೆಗಳಿಗಾಗಿ 2014ರಿಂದ 2024ರ ಅವಧಿಯಲ್ಲಿ 1.73 ಲಕ್ಷ ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಪರಿವರ್ತಿಸಲಾಗಿದೆ. ಈ ಪೈಕಿ ಗಣಿಗಾರಿಕೆ ಹಾಗೂ ಜಲವಿದ್ಯುತ್‌ ಯೋಜನೆಗಳಿಗಾಗಿ ಅತಿ ಹೆಚ್ಚು ಅರಣ್ಯ ಜಮೀನು ಬಳಕೆಯಾಗಿದೆ ಎಂದು ಪರಿಸರ ಸಚಿವಾಲಯವು ಸಂಸತ್ತಿಗೆ ಸೋಮವಾರ ಮಾಹಿತಿ ನೀಡಿದೆ. 

2014ರಿಂದ 2023ರ ಅವಧಿಯಲ್ಲಿ ಅರಣ್ಯ ಪ್ರದೇಶಗಳ ಪರಿವರ್ತನೆಯು ಶೇ 150ರಷ್ಟು ಹೆಚ್ಚಳವಾಗಿದೆ ಎಂಬ ವರದಿಯನ್ನು ಆಧರಿಸಿ ಕಾಂಗ್ರೆಸ್‌ ಸಂಸದ ಸುಖದೇವ್‌ ಭಗತ್‌ ಅವರು ಪ್ರಶ್ನೆ ಕೇಳಿದ್ದರು.

ಈ ಕುರಿತು ಉತ್ತರಿಸಿರುವ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ ಸಿಂಗ್‌, ‘ಅರಣ್ಯ (ಸಂರಕ್ಷಣಾ) ಕಾಯ್ದೆ 1980ರ ಅಡಿಯಲ್ಲಿ 2014ರ ಏಪ್ರಿಲ್‌ 1ರಿಂದ 2024ರ ಮಾರ್ಚ್‌ 31ರ ವರೆಗೆ ಅರಣ್ಯೇತರ ಉದ್ದೇಶಗಳಿಗಾಗಿ 1,73,984.3 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಪರಿವರ್ತಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.‌

ADVERTISEMENT

40,096.17 ಹೆಕ್ಟೇರ್‌ ಪ್ರದೇಶವನ್ನು ಗಣಿಗಾರಿಕೆ ಹಾಗೂ ಕ್ವಾರಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಪರಿವರ್ತಿಸಿದರೆ, 40,138.31 ಹೆಕ್ಟೇರ್‌ ಪ್ರದೇಶವನ್ನು ಜಲವಿದ್ಯುತ್‌ ಯೋಜನೆಗಳಿಗಾಗಿ ಪರಿವರ್ತಿಸಲು ಅನುಮೋದಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. 

ಜತೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ 30,605.59 ಹೆಕ್ಟೇರ್‌, ವಿದ್ಯುತ್‌ ಮಾರ್ಗಗಳ ಅಳವಡಿಕೆಗೆ 17,232.69 ಹೆಕ್ಟೇರ್‌, ರಕ್ಷಣಾ ಸಂಬಂಧಿತ ಯೋಜನೆಗೆ 14,968.14 ಹೆಕ್ಟೇರ್‌ ಮತ್ತು 9,669.28 ಹೆಕ್ಟೇರ್‌ ಅರಣ್ಯ ಜಮೀನ್ನು ಇತರೆ ಉದ್ದೇಶಗಳಿಗೆ ಪರಿವರ್ತಿಸಲಾಗಿದೆ ಎಂದೂ ಹೇಳಿದ್ದಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.