ADVERTISEMENT

ಕೋವಿಡ್ ಲಸಿಕೆ ಅಭಿಯಾನ: ಕಾರ್ಯಾಚರಣೆ ವೆಚ್ಚವಾಗಿ ₹123 ಕೋಟಿ ಬಿಡುಗಡೆ

ಪಿಟಿಐ
Published 6 ಫೆಬ್ರುವರಿ 2021, 6:23 IST
Last Updated 6 ಫೆಬ್ರುವರಿ 2021, 6:23 IST
ಅಶ್ವಿನ್ ಚೌಬೆ(ಮಧ್ಯದಲ್ಲಿರುವವರು) ಸಾಂದರ್ಭಿಕ ಚಿತ್ರ
ಅಶ್ವಿನ್ ಚೌಬೆ(ಮಧ್ಯದಲ್ಲಿರುವವರು) ಸಾಂದರ್ಭಿಕ ಚಿತ್ರ   

ನವದೆಹಲಿ: ಆರಂಭಿಕ ಹಂತದಲ್ಲಿ ಕೋವಿಡ್‌ 19 ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಇದರ ಹೊರತಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ₹123.49 ಕೋಟಿ ಕಾರ್ಯಾಚರಣೆ ವೆಚ್ಚವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಅಶ್ವಿನಿ ಚೌಬೆ ಶುಕ್ರವಾರ ಲೋಕಸಭೆಗೆ ತಿಳಿಸಿದರು.

ಜನವರಿ 16ರಿಂದ ಆರಂಭವಾಗಿರುವ ಕೊರೊನಾ ಲಸಿಕೆ ಅಭಿಯಾನವನ್ನು ಪೂರ್ಣಗೊಳಿಸಲು ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಸಮಯ ಮಿತಿ ನಿಗದಿಪಡಿಸಿಲ್ಲ ಎಂದು ತಿಳಿಸಿದ ಸಚಿವರು, ‘ಕೋ–ವಿನ್ ಪೋರ್ಟ್‌ಲ್‌ನಲ್ಲಿ ನೋಂದಾಯಿಸಲಾದ ಫಲಾನುಭವಿಗಳ ದತ್ತಾಂಶದ ಪ್ರಕಾರ ಲಸಿಕೆಗಳನ್ನು ವಿತರಿಸಲಾಗುತ್ತಿದೆ‘ ಎಂದು ಅವರು ಲಿಖಿತ ಉತ್ತರ ನೀಡಿದರು.

ಸಾರ್ವತ್ರಿಕ ರೋಗನಿರೋಧಕ ಶಕ್ತಿ ಹೆಚ್ಚಿಸುವ (ಯುಐಪಿ) ಕಾರ್ಯಕ್ರಮದ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಮೂಲ ಸೌಕರ್ಯ ಬಳಸಿಕೊಂಡು ಕೊರೊನಾ ಲಸಿಕೆ ಅಭಿಯಾನವನ್ನು ಸುಗಮಗೊಳಿಸಲಾಗಿದೆ. ಇದೇ ವೇಳೆ ಲಸಿಕೆ ಹಾಕುವ ಅಭಿಯಾನ ಕಾರ್ಯ ಮುಂದುವರಿದಿದೆ ಎಂದು ಹೇಳಿದರು.

ADVERTISEMENT

‘ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಪ್ರಕರಣಗಳು ವರದಿಯಾಗಿರುವ ಕುರಿತು ಮಾತನಾಡಿದ ಸಚಿವರು, ಲಸಿಕೆ ಹಾಕಿದ (ಎಇಎಫ್‌ಐ) ನಂತರ ಒಟ್ಟು 7,580 ವ್ಯಕ್ತಿಗಳಿಗೆ ಅಡ್ಡ ಪರಿಣಾಮ ಕಾಣಿಸಿಕೊಂಡಿರುವುದಾಗಿ ವರದಿಯಾಗಿವೆ ಎಂದು ತಿಳಿಸಿದರು.

ಲಸಿಕೆ ಹಾಕಿಸಿಕೊಂಡವರನ್ನು ಗಮನಿಸುವುದಕ್ಕಾಗಿ, ಲಸಿಕೆ ಕೇಂದ್ರದಲ್ಲಿ ಅರ್ಧ ಗಂಟೆ ಕಾಲ ಇರುವಂತೆ ಸೂಚಿಸಲಾಗಿದೆ. ಲಸಿಕೆ ಪಡೆದವರಿಗೆ ತೊಂದರೆಯಾದರೆ, ಕೇಂದ್ರದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಸಿಬ್ಬಂದಿಗೂ ತರಬೇತಿ ನೀಡಲಾಗಿದೆ.

ಭಾರತೀಯ ಮೂಲದ ಕೋವಿಡ್ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಬೇರೆ ಯಾವುದಾದರೂ ದೇಶಗಳೊಂದಿಗೆ ಮಾತುಕತೆ ಅಂತಿಮಗೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಚೌಬೆ, ‘ಈವರಗೆ ಬಾಂಗ್ಲಾದೇಶ, ಸೌದಿ ಅರೇಬಿಯ, ಮೊರಾಕೊ, ಮ್ಯಾನ್ಮಾರ್, ನೇಪಾಳ,ಅಪ್ಘಾನಿಸ್ತಾನ, ಶ್ರೀಲಂಕಾ, ಭೂತಾನ್, ಮಾಲ್ಡೀವ್ಸ್, ಒಮಾನ್, ಬಹ್ರೇನ್, ಮಾರಿಷಸ್, ಸೀಶೆಲ್ಸ್‌, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಮಂಗೊಲಿಯಾಗಳು ಭಾರತದಲ್ಲಿ ತಯಾರಾದ ಕೋವಿಡ್ ಲಸಿಕೆಗಳನ್ನು ಆಮದು ಮಾಡಿಕೊಳ್ಳುವುದನ್ನು ಅಂತಿಮಗೊಳಿಸಿವೆ‘ ಎಂದು ಸಚಿವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.