ADVERTISEMENT

ಪದ್ಮಶ್ರೀ ಪದಕ ಕಳವು: ಬದುಕಿನಲ್ಲಿ ಎಲ್ಲವೂ ಹೋಯಿತು ಎಂದ ಮಾಜಿ ಈಜುಪಟು ಬುಲಾ ಚೌಧರಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 6:14 IST
Last Updated 16 ಆಗಸ್ಟ್ 2025, 6:14 IST
<div class="paragraphs"><p>ಬುಲಾ ಚೌಧರಿ</p></div>

ಬುಲಾ ಚೌಧರಿ

   

ಎಕ್ಸ್ ಚಿತ್ರ

ಕೋಲ್ಕತ್ತ: ಸರ್ಕಾರ ನೀಡಿದ್ದ ಪದ್ಮಶ್ರೀ ಪ್ರಶಸ್ತಿ ಪದಕವು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ತಮ್ಮ ಪೂರ್ವಜರ ಮನೆಯಿಂದ ಕಳವಾಗಿದೆ ಎಂದು ಮಾಜಿ ಈಜುಪಟು ಬುಲಾ ಚೌಧರಿ ದೂರು ನೀಡಿದ್ದಾರೆ.

ADVERTISEMENT

ಬದುಕಿನಲ್ಲಿ ಏನೆಲ್ಲಾ ಗಳಿಸಿದ್ದೆನೋ ಅವೆಲ್ಲವನ್ನೂ ಕಳೆದುಕೊಂಡೆ ಎಂದು ಬುಲಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

‘ನನ್ನ ಬದುಕಿನಲ್ಲಿ ಅತ್ಯಂತ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಸಂಪಾದಿಸಿದ ಎಲ್ಲವನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಆರು ಚಿನ್ನದ ಪದಕ ಸೇರಿ ಎಲ್ಲಾ ಪದಕಗಳನ್ನೂ ನಾನು ಕಳೆದುಕೊಂಡಿದ್ದೇನೆ. ಎಲ್ಲವನ್ನೂ ಹೊತ್ತೊಯ್ದ ಕಳ್ಳರು ಅರ್ಜುನ ಪ್ರಶಸ್ತಿ ಮತ್ತು ತೇನ್‌ಸಿಂಗ್‌ ನಾರ್ವೆ ಪದಕವನ್ನು ಬಿಟ್ಟುಹೋಗಿದ್ದಾರೆ’ ಎಂದಿದ್ದಾರೆ.

‘ಬಹುಶಃ ಕಳ್ಳರಿಗೆ ಅರ್ಜುನ ಮತ್ತು ತೇನ್‌ಸಿಂಗ್ ಪದಕಗಳು ಒಂದೇ ಗಾತ್ರದಾದ್ದರಿಂದ ಬಿಟ್ಟುಹೋಗಿರಬಹುದು. ಹಿಂಡ್‌ಮೋಟಾರ್‌ನಲ್ಲಿರುವ ಮನೆಯಲ್ಲೇ ನಾನು ಎಲ್ಲವನ್ನೂ ಇಟ್ಟಿರುತ್ತೇನೆ. ಆಗಾಗ ಭೇಟಿ ನೀಡುತ್ತಿರುತ್ತೇನೆ. ಬೀಗ ಹಾಕಿದ್ದರೂ ಇದು ಮೂರನೇ ಬಾರಿ ಕಳ್ಳತನವಾಗುತ್ತಿದೆ’ ಎಂದು ಬುಲಾ ಹೇಳಿದ್ದಾರೆ.

ಆ. 15ರಂದು ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಲು ಬುಲಾ ತೆರಳಿದ್ದರು. ಆ ಸಂದರ್ಭದಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

‘ಅವರಿಗೆ ನನ್ನ ಪದಕಗಳೇ ಏಕೆ ಬೇಕು? ಅವು ನನ್ನ ಬದುಕಿನ ಅಮೂಲ್ಯ ವಸ್ತುಗಳು. ನನ್ನ ವೃತ್ತಿ ಜೀವನದ ಫಲಗಳು. ಪ್ರತಿಬಾರಿಯೂ ನನ್ನ ಮನೆಯನ್ನೇ ಏಕೆ ಗುರಿಯಾಗಿಸಿ ಕಳ್ಳತನವಾಗುತ್ತಿದೆ’ ಎಂದು ಬುಲಾ ಪ್ರಶ್ನಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.