ನೌಕಪಡೆ
(ಚಿತ್ರ ಕೃಪೆ: X/@indiannavy)
ನವದೆಹಲಿ: ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿರುವ ಸಂದರ್ಭದಲ್ಲೇ ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ಸಮರಾಭ್ಯಾಸ ನಡೆಸಿದ್ದು, ‘ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ’ ಎಂಬ ಸಂದೇಶ ರವಾನಿಸಿದೆ.
ನೌಕಾಪಡೆಯ ಪಶ್ಚಿಮ ನೌಕಾ ಕಮಾಂಡ್‌ನ ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಅರಬ್ಬಿ ಸಮುದ್ರದಲ್ಲಿ ಜಾಗೃತ ಸ್ಥಿತಿಯಲ್ಲಿ ಇಡಲಾಗಿದೆ.
‘ಭಾರತೀಯ ನೌಕಾಪಡೆಯು ಯಾವಾಗಲೂ ಜಾಗರೂಕವಾಗಿರುತ್ತದೆ. ಪಹಲ್ಗಾಮ್ ಘಟನೆಯ ನಂತರ ಯುದ್ಧ ಸನ್ನದ್ಧತೆಯ ಮಟ್ಟವನ್ನು ಹೆಚ್ಚಿಸಲಾಗಿದೆ’ ಎಂದು ಪಶ್ಚಿಮ ನೌಕಾ ಕಮಾಂಡ್‌ನ ಮುಂಬೈನಲ್ಲಿರುವ ಕೇಂದ್ರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಶತ್ರುವಿನ ಯುದ್ಧ ನೌಕೆಯನ್ನು ನಾಶಪಡಿಸುವ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಯುದ್ಧ ನೌಕೆಯಿಂದ ಕ್ಷಿಪಣಿಗಳನ್ನು ಹಾರಿಸುವ ಚಿತ್ರ ಹಾಗೂ ವಿಡಿಯೊಗಳನ್ನು ಭಾರತೀಯ ನೌಕಾಪಡೆಯು ಭಾನುವಾರ ಬಿಡುಗಡೆ ಮಾಡಿದೆ. ಆದರೆ ಸಮರಾಭ್ಯಾಸ ಯಾವಾಗ ನಡೆಸಲಾಗಿದೆ ಎಂಬ ವಿವರಗಳನ್ನು ನೀಡಿಲ್ಲ.
‘ನೌಕಾ ಕಾರ್ಯಾಚರಣೆಗಳನ್ನು ನಡೆಸಲು ಬಳಸುವ ಯುದ್ಧ ನೌಕೆಗಳು, ವಿಮಾನಗಳು, ಇತರ ವ್ಯವಸ್ಥೆಗಳು ಮತ್ತು ಸಿಬ್ಬಂದಿಯ ಸನ್ನದ್ಧತೆಯನ್ನು ಪರೀಕ್ಷೆಗೆ ಒಳಪಡಿಸಲು ಸಮರಾಭ್ಯಾಸ ನಡೆಸಲಾಗಿದೆ’ ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ.
‘ದೇಶದ ಕಡಲ ಭದ್ರತೆಯನ್ನು ಕಾಪಾಡಲು ಭಾರತೀಯ ನೌಕಾಪಡೆಯು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ, ಹೇಗಾದರೂ ಸಿದ್ಧವಾಗಿದೆ’ ಎಂದು ಹೇಳಿದೆ.
ಯುದ್ಧವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಒಳಗೊಂಡಂತೆ ಪಶ್ಚಿಮ ಕಮಾಂಡ್‌ನ ನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳು ಸಮರಾಭ್ಯಾಸದಲ್ಲಿ ಪಾಲ್ಗೊಂಡವು.
ನೌಕಾಪಡೆಯು ಕಳೆದ ವಾರ, ನೆಲದಿಂದ ಆಗಸಕ್ಕೆ ಚಿಮ್ಮಬಲ್ಲ ಮಧ್ಯಮ ವ್ಯಾಪ್ತಿಯ ಕ್ಷಿಪಣಿಯ ಪರೀಕ್ಷೆಯನ್ನು ಯುದ್ಧನೌಕೆ ‘ಐಎನ್‌ಎಸ್ ಸೂರತ್’ನಿಂದ ಯಶಸ್ವಿಯಾಗಿ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.