ಅಮರನಾಥ ಯಾತ್ರೆ (ಸಂಗ್ರಹ ಚಿತ್ರ)
ಶ್ರೀನಗರ: ಪಹಲ್ಗಾಮ್ ದಾಳಿ ಬಳಿಕ ಅಮರನಾಥ ಯಾತ್ರೆಗೆ ನೋಂದಾಯಿಸಿಕೊಳ್ಳುವ ಭಕ್ತರ ಸಂಖ್ಯೆ ಶೇ 10ರಷ್ಟು ಇಳಿಕೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಗುರುವಾರ ಹೇಳಿದ್ದಾರೆ.
ಏಪ್ರಿಲ್ 22ರ ಘಟನೆಗೆ ಮೊದಲು ಯಾತ್ರಿಕರ ನೋಂದಣಿ ಉತ್ತಮ ವೇಗದಲ್ಲಿ ನಡೆಯುತ್ತಿತ್ತು. ಆದರೆ ನಂತರ ನೋಂದಣಿ ಕಡಿಮೆಯಾಯಿತು. ಕಳೆದ ವರ್ಷಕ್ಕೆ ಹೋಲಿಸಿದರೆ ನೋಂದಣಿಯಲ್ಲಿ ಶೇ10.19 ರಷ್ಟು ಕುಸಿತ ಕಂಡುಬಂದಿದೆ ಎಂದು ಸಿನ್ಹಾ ರಾಜಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಹಲ್ಗಾಮ್ ದಾಳಿಗೂ ಮೊದಲು 2.36 ಲಕ್ಷ ಭಕ್ತರು ಯಾತ್ರೆಗೆ ನೋಂದಣಿ ಮಾಡಿದ್ದರು. ಈಗಾಗಲೇ ಏಪ್ರಿಲ್ 22ಕ್ಕೂ ಮೊದಲು ನೋಂದಾಯಿಸಿದ ಭಕ್ತರ ಮರುಪರಿಶೀಲನೆಯನ್ನು ಅಮರಾನಾಥ ದೇವಾಲಯದ ಬೋರ್ಡ್ ಆರಂಭಿಸಿದೆ. 85 ಸಾವಿರ ಭಕ್ತರು ನೋಂದಣಿಯನ್ನು ಖಚಿತಪಡಿಸಿದ್ದಾರೆ, ಜಮ್ಮು ಮತ್ತು ಕಾಶ್ಮಿರ ಸರ್ಕಾರ ಮತ್ತು ಭದ್ರತಾ ಪಡೆಗಳು ಕೈಗೊಂಡ ಕ್ರಮಗಳಿಂದ ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ ಎಂದಿದ್ದಾರೆ.
ಯಾತ್ರೆ ಜುಲೈ 3 ರಿಂದ ಆರಂಭವಾಗಲಿದ್ದು, ಆಗಸ್ಟ್ 9ರವರೆಗೆ ನಡೆಯಲಿದೆ. ಈಗಾಗಲೇ ಶಿಬಿರಗಳು ಸೇರಿದಂತೆ ಯಾತ್ರೆಗೆ ತೆರಳುವ ಸ್ಥಳಗಳಲ್ಲಿ ಬಹುಹಂತದ ಭದ್ರತೆ ಕೈಗೊಳ್ಳಲಾಗಿದೆ ಎಂದು ಸಿನ್ಹಾ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.