ನವದೆಹಲಿಯಲ್ಲಿರುವ ಪ್ರಧಾನಮಂತ್ರಿ ನಿವಾಸದಲ್ಲಿ ಬುಧವಾರ ನಡೆದ ಸಭೆಯನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದರು. ರಾಜನಾಥ ಸಿಂಗ್, ಅಮಿತ್ ಶಾ ಇದ್ದಾರೆ.
ಪಿಟಿಐ ಚಿತ್ರ
ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಪಾಕಿಸ್ತಾನದ ಜೊತೆಗಿನ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಅಮಾನತುಗೊಳಿಸಲು ತೀರ್ಮಾನಿಸಿದೆ.
ಪಾಕಿಸ್ತಾನದ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿಮೆ ಮಾಡಲು ತೀರ್ಮಾನಿಸಿರುವ ಕೇಂದ್ರ ಸರ್ಕಾರವು, ಭಾರತದಲ್ಲಿ ಇರುವ ಪಾಕಿಸ್ತಾನದ ದೂತಾವಾಸ ಕಚೇರಿಗಳಲ್ಲಿನ ಮಿಲಿಟರಿ ರಾಜತಾಂತ್ರಿಕರನ್ನು ದೇಶದಿಂದ ಹೊರಗೆ ಕಳುಹಿಸಲು ತೀರ್ಮಾನಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನವದೆಹಲಿಯಲ್ಲಿ ಬುಧವಾರ ಸಂಜೆ ನಡೆದ ‘ಭದ್ರತೆ ಕುರಿತ ಸಚಿವ ಸಂಪುಟ’ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಗಡಿಯಾಚೆಗಿನ ನಂಟು ಇದೆ ಎಂಬುದು ಈ ತೀರ್ಮಾನಕ್ಕೆ ಕಾರಣ. ಸಭೆಯು ಎರಡು ತಾಸಿಗೂ ಹೆಚ್ಚು ಅವಧಿಗೆ ನಡೆಯಿತು.
1960ರಲ್ಲಿ ಮಾಡಿಕೊಂಡ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತಿನಲ್ಲಿ ಇರಿಸಲಾಗಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ವಿಶ್ವಾಸ ಮೂಡಿಸುವ ಬಗೆಯಲ್ಲಿ ಹಾಗೂ ಶಾಶ್ವತವಾಗಿ ನಿಲ್ಲಿಸುವವರೆಗೆ ಈ ತೀರ್ಮಾನ ಜಾರಿಯಲ್ಲಿ ಇರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಅಟ್ಟಾರಿ ಗಡಿಯಲ್ಲಿ ಇರುವ ಚೆಕ್‌ಪೋಸ್ಟ್‌ಅನ್ನು (ತಪಾಸಣಾ ಠಾಣೆ) ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗುತ್ತದೆ ಎಂದು ಅವರು ಹೇಳಿದರು. ಈ ಮಾರ್ಗದ ಮೂಲಕ ಗಡಿ ದಾಟಿದವರು ಮೇ 1ಕ್ಕೆ ಮೊದಲು ವಾಪಸ್ಸಾಗಬೇಕು.
ನವದೆಹಲಿಯಲ್ಲಿ ಇರುವ ಪಾಕಿಸ್ತಾನದ ದೂತಾವಾಸ ಕಚೇರಿಗಳಲ್ಲಿ ಕರ್ತವ್ಯದಲ್ಲಿರುವ ಮಿಲಿಟರಿ, ರಕ್ಷಣೆ, ನೌಕಾಸೇನೆ ಮತ್ತು ವಾಯುಸೇನೆಯ ಸಲಹೆಗಾರರನ್ನು ಭಾರತದಿಂದ ಹೊರಕ್ಕೆ ಕಳುಹಿಸಲಾಗುತ್ತದೆ ಎಂದರು. ಅವರು ಒಂದು ವಾರದಲ್ಲಿ ಭಾರತದಿಂದ ನಿರ್ಗಮಿಸಬೇಕಿದೆ.
ಇಸ್ಲಾಮಾಬಾದ್‌ನಲ್ಲಿ ಇರುವ ಭಾರತದ ದೂತಾವಾಸ ಕಚೇರಿಗಳಿಂದ ರಕ್ಷಣೆ, ನೌಕಾಪಡೆ ಮತ್ತು ವಾಯುಪಡೆಯ ಸಲಹೆಗಾರರನ್ನು ಭಾರತವು ವಾಪಸ್ ಕರೆಸಿಕೊಳ್ಳಲಿದೆ.
‘ದೂತಾವಾಸ ಕಚೇರಿಗಳ ಸಿಬ್ಬಂದಿ ಸಂಖ್ಯೆಯನ್ನು ಈಗಿರುವ 55ರಿಂದ 30ಕ್ಕೆ ಇಳಿಸಲಾಗುತ್ತದೆ. ಇದು ಮೇ 1ಕ್ಕೆ ಮೊದಲು ಜಾರಿಗೆ ಬರಲಿದೆ’ ಎಂದು ಮಿಸ್ರಿ ಹೇಳಿದರು.
ಪಾಕಿಸ್ತಾನದ ಪ್ರಜೆಗಳಿಗೆ ಸಾರ್ಕ್ ವೀಸಾ ವಿನಾಯಿತಿ ಯೋಜನೆಯ ಅಡಿಯಲ್ಲಿ ಭಾರತ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಈಗಾಗಲೇ ಇಂತಹ ವೀಸಾ ಪಡೆದಿದ್ದರೆ, ಅದು ರದ್ದಾಗಿದೆ ಎಂದು ಭಾವಿಸಬೇಕು ಎಂಬ ಮಾಹಿತಿಯನ್ನು ಮಿಸ್ರಿ ನೀಡಿದರು.
ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಗ್ಗೆ ಸಮಿತಿಗೆ ಪೂರ್ಣ ವಿವರ ಒದಗಿಸಲಾಯಿತು. ‘ವಿಶ್ವದ ಹಲವು ರಾಷ್ಟ್ರಗಳು ಭಾರತದ ಜೊತೆ ನಿಲ್ಲುವುದಾಗಿ ಹೇಳಿವೆ’ ಎಂದು ಮಿಸ್ರಿ ಮಾಹಿತಿ ನೀಡಿದರು.
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯಲ್ಲಿ, ಈ ಪ್ರದೇಶವು ಆರ್ಥಿಕ ಬೆಳವಣಿಗೆಯ ಕಡೆ ಸಾಗುತ್ತಿರುವ ಕಾರಣಕ್ಕೆ ಈ ದಾಳಿ ನಡೆದಿದೆ ಎಂಬುದನ್ನು ಸಭೆಯ ಗಮನಕ್ಕೆ ತರಲಾಯಿತು ಎಂದರು.
ಭದ್ರತಾ ಸ್ಥಿತಿಯನ್ನು ಪರಿಶೀಲಿಸಿದ ಸಮಿತಿಯು, ಗರಿಷ್ಠ ಎಚ್ಚರ ಕಾಯ್ದುಕೊಳ್ಳುವಂತೆ ಎಲ್ಲ ಪಡೆಗಳಿಗೆ ಸೂಚನೆ ನೀಡಿದೆ.
‘ಅಪಾರ ಶಸ್ತ್ರಾಸ್ತ್ರ ಹೊಂದಿದ್ದರು’
ಶ್ರೀನಗರ: ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯ ಹಿಂದೆ, ಇಬ್ಬರು ಸ್ಥಳೀಯರು ಸೇರಿದಂತೆ 5–6 ಮಂದಿ ಉಗ್ರರ ಕೈವಾಡ ಇದೆ. ಇವರು ಅಪಾರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ.
ಉಗ್ರರು ಹತ್ಯೆ ಮಾಡುವುದಕ್ಕೆ ಅನುಸರಿಸಿದ ವಿಧಾನಗಳು ಭೀಕರವಾಗಿದ್ದವು ಎಂಬ ಮಾತನ್ನು ಈ ದಾಳಿಯನ್ನು ಪ್ರತ್ಯಕ್ಷ ಕಂಡ ಕೆಲವರು ಹೇಳುತ್ತಾರೆ.
‘ಉಗ್ರರು ಸೇನೆಯ ಯೋಧರಂತೆ ಸಮವಸ್ತ್ರಗಳನ್ನು ಧರಿಸಿದ್ದರು. ಪ್ರವಾಸಿಗರ ಬಳಿ ತೆರಳಿ, ಅವರ ಗುರುತಿನ ಚೀಟಿ ಕೇಳಿದ್ದಾರೆ. ನಂತರ ಎಕೆ–47 ರೈಫಲ್‌ಗಳಿಂದ ಗುಂಡು ಹಾರಿಸಿದ್ದಾರೆ’ ಎಂದು ಅವರು ವಿವರಿಸುತ್ತಾರೆ.
‘ಯಾವುದೇ ವಿವೇಚನೆಯಿಲ್ಲದೆಯೇ, ನಾಗರಿಕರನ್ನು ಗುರಿಯಾಗಿಸಿ ಉಗ್ರರು ಗುಂಡು ಹಾರಿಸಿದರು. ಕೆಲವೇ ಕ್ಷಣಗಳಲ್ಲಿ ಘಟನಾ ಸ್ಥಳದಲ್ಲಿ ಆತಂಕ, ಗೊಂದಲ ಮನೆ ಮಾಡಿತ್ತು’ ಎಂದೂ ಕೆಲವರು ಭೀಕರ ಕ್ಷಣಗಳನ್ನು ವಿವರಿಸುತ್ತಾರೆ.
‘ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ಮಾಡುವುದಕ್ಕೂ ಮುನ್ನ ಒಂದು ಗಂಟೆಗೂ ಹೆಚ್ಚು ಸಮಯದಿಂದ ಉಗ್ರರು ಸ್ಥಳದಲ್ಲಿ ಇದ್ದರು. ತಾವು ರೂಪಿಸಿದ್ದ ಯೋಜನೆಯಂತೆಯೇ ದಾಳಿ ಮಾಡಿದರು ಹಾಗೂ ಇದು ಅಧಿಕ ಸಾವು–ನೋವಿಗೆ ಕಾರಣವಾಯಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರ ಇಲ್ಲ ಎಂದು ಹೇಳಿರುವ ಪಾಕಿಸ್ತಾನ, ‘ಹಿಂದುತ್ವ ಶಕ್ತಿಗಳಿಂದ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ದಂಗೆಗಳ ಪೈಕಿ ಈ ದಾಳಿಯೂ ಒಂದು’ ಎಂದು ಬುಧವಾರ ಹೇಳಿದೆ.
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸುವುದಕ್ಕೆ ಭಾರತವು ಅಫ್ಗಾನಿಸ್ತಾನದ ನೆಲವನ್ನು ಬಳಸಿಕೊಳ್ಳುತ್ತಿದೆ ಎಂದು ತನ್ನ ಆರೋಪವನ್ನು ಪಾಕಿಸ್ತಾನ ಪುನರುಚ್ಚರಿಸಿದೆ.
‘ಭಾರತದ ಅನೇಕ ರಾಜ್ಯಗಳಲ್ಲಿ ಹತ್ತು ಹಲವು ದಂಗೆಗಳು ನಡೆಯುತ್ತಿವೆ. ನಾಗಾಲ್ಯಾಂಡ್‌ನಿಂದ ಹಿಡಿದು ಕಾಶ್ಮೀರದವರೆಗೆ, ಛತ್ತೀಸಗಢ, ಮಣಿಪುರ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನರು ದಂಗೆ ಏಳುತ್ತಿದ್ದಾರೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.
* ಸಿಂಧೂ ಜಲ ಒಪ್ಪಂದ ಅಮಾನತು
* ವಾಘಾ–ಅಟ್ಟಾರಿ ಗಡಿ ಬಂದ್
* ಪಾಕಿಸ್ತಾನದ ನಾಗರಿಕರಿಗೆ ಭಾರತದ ವೀಸಾ ಇಲ್ಲ
* ಪಾಕಿಸ್ತಾನದಲ್ಲಿನ ಭಾರತದ ದೂತಾವಾಸ ಕಚೇರಿಗಳಲ್ಲಿನ ಸಿಬ್ಬಂದಿ ಸಂಖ್ಯೆ ಕಡಿತ
* ಭಾರತದಲ್ಲಿ ಇರುವ ಪಾಕಿಸ್ತಾನದ ದೂತಾವಾಸ ಕಚೇರಿಗಳಲ್ಲಿನ ಮಿಲಿಟರಿ ರಾಜತಾಂತ್ರಿಕರಿಗೆ ಭಾರತದಿಂದ ಹೊರನಡೆಯಲು ಸೂಚನೆ
ಸಿಂಧೂ ಜಲ ಒಪ್ಪಂದವು ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960 ರಲ್ಲಿ ಸಾಕಾರಗೊಂಡಿತು. ಭಾರತ- ಪಾಕಿಸ್ತಾನದ ನಡುವೆ ಹಲವು ಬಾರಿ ಸಂಘರ್ಷ ಉಂಟಾಗಿದ್ದರೂ ಈ ಒಪ್ಪಂದವನ್ನು ಅಮಾನತು ಮಾಡಿದ್ದ ನಿದರ್ಶನ ಇಲ್ಲ.
ಈಗ ಕೇಂದ್ರವು ಈ ಒಪ್ಪಂದವನ್ನು ತಕ್ಷಣದಿಂದಲೇ ಅಮಾನತು ಮಾಡಿರುವ ಪರಿಣಾಮ, ರಾವಿ, ಬಿಯಾಸ್ ಮತ್ತು ಸತ್ಲೇಜ್ ನದಿಗಳ ನೀರು ಪಾಕಿಸ್ತಾನಕ್ಕೆ ಹರಿಯುವುದರ ಮೇಲೆ ಪರಿಣಾಮ ಉಂಟಾಗಲಿದೆ ಎಂದು ವಿಶ್ಲೇಷಣೆಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.