ADVERTISEMENT

ಬಾಹ್ಯಾಕಾಶ ಯೋಜನೆಗಳು ಭಾರತದ ಸುರಕ್ಷತೆ, ಭದ್ರತೆಗಾಗಿ: ISRO ಅಧ್ಯಕ್ಷ ನಾರಾಯಣನ್

ಪಿಟಿಐ
Published 15 ಮೇ 2025, 13:34 IST
Last Updated 15 ಮೇ 2025, 13:34 IST
<div class="paragraphs"><p>ವಿ. ನಾರಾಯಣನ್</p></div>

ವಿ. ನಾರಾಯಣನ್

   

ಚೆನ್ನೈ: ‘ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳು ದೇಶದ ಸುರಕ್ಷತೆ ಮತ್ತು ಭದ್ರತೆಗೆ ಪೂರಕವಾಗಿಯೇ ರೂಪಿಸಲಾಗಿರುತ್ತದೆ’ ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಗುರುವಾರ ಹೇಳಿದ್ದಾರೆ.

101ನೇ ಉಡ್ಡಯನಕ್ಕೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ವಿವಿಧ ಕ್ಷೇತ್ರಗಳಲ್ಲಿ ದೇಶದ ಅಗತ್ಯಕ್ಕೆ ಅನುಗುಣವಾಗಿ ಇಸ್ರೊ ತನ್ನ ಯೋಜನೆಗಳನ್ನು ರೂಪಿಸುತ್ತದೆ. ಅವುಗಳಿಗೆ ಪೂರಕವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತದೆ’ ಎಂದಿದ್ದಾರೆ.

ADVERTISEMENT

ದೇಶದ ರಕ್ಷಣಾ ಇಲಾಖೆಗಾಗಿಯೇ ನಿರ್ದಿಷ್ಟ ಉಪಗ್ರಹಗಳ ಅಭಿವೃದ್ಧಿ ಯೋಜನೆ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮೆಲ್ಲಾ ಕಾರ್ಯಕ್ರಮಗಳು ದೇಶ ಮತ್ತು ದೇಶದ ಜನರ ಸುರಕ್ಷತೆ ಮತ್ತು ಭದ್ರತೆಗಾಗಿ ಮೀಸಲು. ನಾವು ಯಾವುದೇ ರಾಷ್ಟ್ರದೊಂದಿಗೆ ಸ್ಪರ್ಧೆಗಿಳಿದಿಲ್ಲ. ನಮ್ಮ ಉದ್ದೇಶಗಳು ನಮ್ಮ ಅಗತ್ಯಗಳಿಗೆ ಪೂರಕವಾಗಿ ಸಿದ್ಧಗೊಂಡಿರುತ್ತವೆ’ ಎಂದು ಹೇಳಿದ್ದಾರೆ.

‘ಜನವರಿಯಲ್ಲಿ ಇಸ್ರೊ ತನ್ನ 100ನೇ ರಾಕೇಟ್ ಉಡ್ಡಯನ ಮಾಡಿತ್ತು. ಇದೀಗ 101ನೇ ಯೋಜನೆಯಾಗಿ ಭೂ ಸರ್ವೇಕ್ಷಣಾ ಉಪಗ್ರಹ RISAT-18 ಉಡ್ಡಯನಕ್ಕೆ ಸಿದ್ಧತೆಗಳು ನಡೆದಿವೆ. ಇದಕ್ಕಾಗಿ ಪಿಎಸ್‌ಎಲ್‌ವಿ–ಸಿ61 ರಾಕೇಟ್ ಬಳಸಲಾಗುತ್ತಿದೆ. ಮೇ 18ರಂದು ಉಡ್ಡಯನ ನಡೆಯಲಿದೆ’ ಎಂದು ನಾರಾಯಣನ್ ಹೇಳಿದ್ದಾರೆ.

‘1979ರಲ್ಲಿ ಇಸ್ರೊ ತನ್ನ ಮೊದಲ ರಾಕೇಟ್‌ ಉಡ್ಡಯನ ಮಾಡಿತ್ತು. 1980ರಿಂದ ಈವರೆಗೂ ಎಸ್‌ಎಲ್‌ವಿ3 ಶೇ 98ರಷ್ಟು ಸಫಲತೆ ಕಂಡಿದೆ’ ಎಂದು ತಿಳಿಸಿದರು.

ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆಗೈದ ಪಾಕಿಸ್ತಾನದ ಉಗ್ರರು ಹಾಗೂ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಮಾತನಾಡಿದ್ದ ವಿ. ನಾರಾಯಣನ್‌, ‘ದೇಶದ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಕಾರ್ಯತಂತ್ರದ ಉದ್ದೇಶಕ್ಕಾಗಿ ಕನಿಷ್ಠ 10 ಉಪಗ್ರಹಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ ಎಂದಿದ್ದರು.

‘ನಮ್ಮ ನೆರೆಹೊರೆಯ ದೇಶಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗಾಗಿ ನಮ್ಮ ದೇಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾದರೆ ಉಪಗ್ರಹಗಳ ಬಳಕೆ ಅತಿ ಅವಶ್ಯಕ. ನಮ್ಮ 7 ಸಾವಿರ ಕಿ.ಮೀ ಸಮುದ್ರ ತೀರ ಪ್ರದೇಶಗಳನ್ನು ಹಾಗೂ ಉತ್ತರ ಭಾಗವನ್ನು ಸಂಪೂರ್ಣವಾಗಿ ಮೇಲ್ವಿಚಾರಣೆ ಮಾಡಬೇಕು. ಇದನ್ನು ಉಪಗ್ರಹ ಮತ್ತು ಡ್ರೋನ್‌ ತಂತ್ರಜ್ಞಾನವಿಲ್ಲದೆ ಸಾಧಿಸಲು ಸಾಧ್ಯವಿಲ್ಲ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.